ಮುಂಬೈ: ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ಸೇರ್ಪಡೆಗೊಂಡ ನಂತರ ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. 2028ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಕ್ರಿಕೆಟ್ (ಟಿ20), ಫ್ಲಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸರ್) ಮತ್ತು ಸ್ಕ್ವಾಷ್ ಕ್ರೀಡೆಗಳನ್ನು ಸೇರಿಸುವಂತೆ ಐಒಸಿ ಕಾರ್ಯಕಾರಿ ಮಂಡಳಿ ಶುಕ್ರವಾರ ಅಧಿಕೃತವಾಗಿ ಶಿಫಾರಸು ಮಾಡಿತು.
ಈ ಐದು ಕ್ರೀಡೆಗಳ ಸೇರ್ಪಡೆ ಕುರಿತು ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ. ಐಒಸಿಯ 141ನೇ ಅಧಿವೇಶನವು ಭಾರತದಲ್ಲಿ ಅಕ್ಟೋಬರ್ 15-17 ರವರೆಗೆ ನಡೆಯಲಿದ್ದು, ಈ ವೇಳೆ ಪ್ರಸ್ತಾವನೆಯನ್ನು ಮತಕ್ಕೆ ಹಾಕಲಾಗುವುದು. ಕ್ರಿಕೆಟ್ ವಿಶ್ವಮಟ್ಟದಲ್ಲಿ ಅಭಿಮಾನಿಗಳನ್ನು ಗಳಿಸಿದ್ದು, ಅಮೆರಿಕದಲ್ಲೂ ಒಲವು ಹೆಚ್ಚುತ್ತಿದೆ.
"ಬೇಸ್‌ಬಾಲ್-ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸ್), ಸ್ಕ್ವಾಷ್ ಮತ್ತು ಕ್ರಿಕೆಟ್. ಕ್ರಿಕೆಟ್ಅನ್ನು ಟಿ20 ಮಾದರಿಯನ್ನು ಆಡಿಸಲಾಗುವುದು. ಏಕೆಂದರೆ ಇದು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಏಕದಿನ ಮಾದರಿಯಲ್ಲಿ ಈಗಾಗಲೇ ವಿಶ್ವಕಪ್ ದೊಡ್ಡ ಯಶಸ್ಸು ಹೊಂದಿದೆ" ಎಂದು ಐಒಸಿ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಥಾಮಸ್ ಬ್ಯಾಚ್ ಹೇಳಿದರು.
ಲಾಸ್ ಏಂಜಲೀಸ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಪ್ರಕಾರ, ಪುರುಷ ಮತ್ತು ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ ಆರು ತಂಡಗಳ ಈವೆಂಟ್ ಅನ್ನು ನಿಗದಿಪಡಿಸಿತ್ತು. ಆತಿಥೇಯ ಅಮೆರಿಕ ಹೊರತುಪಡಿಸಿ ಉಳಿದ ಐದು ತಂಡಗಳು ಯಾವುದು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಲಿಂಗ ಸಮಾನತೆ ಆಧಾರದ ಮೇಲೆ ಪುರುಷ ಮತ್ತು ವನಿತೆಯ ಕ್ರಿಕೆಟ್ ಪರಿಚಯಿಸಲಾಗುತ್ತದೆ ಎಂದು ಐಒಸಿಯ ಕ್ರೀಡಾ ನಿರ್ದೇಶಕ ಕಿಟ್ ಮೆಕ್‌ಕಾನ್ನೆಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಶುಭ್‌ಮನ್ ಗಿಲ್ಗೆ 'ಐಸಿಸಿ ತಿಂಗಳ ಆಟಗಾರ' ಗೌರವ; ನಾಳೆ ಪಾಕಿಸ್ತಾನ ವಿರುದ್ಧ ಆಡಿದರೆ ನಂ.1 ಪಟ್ಟ