ಹ್ಯಾಂಗ್ಝೌ:ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕಗಳ ಬೇಟೆಯನ್ನು ಮುಂದುವರಿಸಿದೆ. ಬುದ್ಧಿಮತ್ತೆಯ ಕ್ರೀಡೆಯಾದ ಚೆಸ್ನಲ್ಲಿ ಮಹಿಳಾ ಮತ್ತು ಪುರುಷ ತಂಡಗಳೆರಡೂ ಬೆಳ್ಳಿಯನ್ನು ಗೆದ್ದಿವೆ. ಇತ್ತ 86 ಕೆಜಿ ವಿಭಾಗದ ಕುಸ್ತಿಯಲ್ಲಿ ದೀಪಕ್ ಪೂನಿಯಾ ರಜತ ಸಾಧನೆ ಮಾಡಿದರು. ಈ ಮೂಲಕ ಪದಕಗಳ ಸಂಖ್ಯೆ 107ಕ್ಕೆ ಏರಿದೆ.
ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ, ಇಂಟರ್‌ನ್ಯಾಶನಲ್ ಮಾಸ್ಟರ್ ವೈಶಾಲಿ ರಮೇಶ್‌ಬಾಬು, ವಂತಿಕಾ ಅಗರವಾಲ್ ಮತ್ತು ಸವಿತಾಶ್ರೀ ಬಾಸ್ಕರ್ ಅವರು ತಮ್ಮ ಕೌಶಲ್ಯ ಪ್ರದರ್ಶಿಸಿ 15 ಮ್ಯಾಚ್ ಪಾಯಿಂಟ್‌ಗಳೊಂದಿಗೆ ಅಂತಿಮ ಸುತ್ತಿನಲ್ಲಿ ದಕ್ಷಿಣ ಕೊರಿಯಾವನ್ನು 4-0 ಅಂತರದಲ್ಲಿ ಸೋಲಿಸಿ ರಜತ ಪದಕವನ್ನು ಪಡೆದರು.
ಇದರ ಜೊತೆಗೆ ಕೂಟದ ಅಗ್ರ ಶ್ರೇಯಾಂಕದ ಚೀನಾ ತಂಡವು ಯುಎಇ ವಿರುದ್ಧ ತನ್ನ ಕೊನೆಯ ಸುತ್ತಿನ ಪಂದ್ಯವನ್ನು 4-0 ಅಂತರದಿಂದ ಗೆದ್ದು 17/18 ಮ್ಯಾಚ್ ಪಾಯಿಂಟ್‌ಗಳೊಂದಿಗೆ ಚಿನ್ನವನ್ನು ತನ್ನದಾಗಿಸಿಕೊಂಡಿತು. ವಿದಿತ್, ಅರ್ಜುನ್ ಮತ್ತು ಹರಿಕೃಷ್ಣ ಅವರಿದ್ದ ಭಾರತೀಯ ಪುರುಷ ಚೆಸ್ ತಂಡ ಫಿಲಿಪೈನ್ಸ್ ವಿರುದ್ಧ 3.5- 0.5 ಪಾಯಿಂಟ್ಗಳ ಗೆಲುವಿನೊಂದಿಗೆ ಬೆಳ್ಳಿ ಪದಕದ ಮೂಲಕ ಅಭಿಯಾನವನ್ನು ಮುಗಿಸಿತು.
ಅಗ್ರ ಶ್ರೇಯಾಂಕದ ಅರ್ಜುನ್ ಎರಿಗೈಸಿ, ಡಿ ಗುಕೇಶ್, ವಿದಿತ್ ಗುಜರಾತಿ ಮತ್ತು ಹರಿಕೃಷ್ಣ ಪೆಂಟಾಲ ಎಲ್ಲರೂ ತಮ್ಮ ಎದುರಾಳಿ ವಿರುದ್ಧ ಜಯ ಸಾಧಿಸಿದರೆ, ಗ್ರ್ಯಾಂಡ್ಮಾಸ್ಟರ್ ಆರ್ ಪ್ರಗ್ನಾನಂದ್ ಅವರು ಡ್ರಾ ಸಾಧಿಸಿದರು. ಇದರಿಂದ ಇರಾನ್ ಚಿನ್ನ ಗೆದ್ದಿತು.