ಬೆಂಗಳೂರು:ಎರಡು ತಿಂಗಳ ಲಾಕ್ಡೌನ್ ನಂತರ ಭಾರತದ ಮಹಿಳಾ ಹಾಗೂ ಪುರುಷರ ಹಾಕಿ ತಂಡಗಳು ನಿಧಾನವಾಗಿ ಕೋವಿಡ್ ಸಾಂಕ್ರಾಮಿಕದ ಭೀತಿಯಿರುವ ಈ ಸಂದರ್ಭದಲ್ಲಿ ಸಾಯ್ ಹೊರಡಿಸಿರುವ ಹೊಸ ನಿಯಮಗಳನ್ನು ನಿಧಾನವಾಗಿ ಅಳವಡಿಸಿಕೊಳ್ಳುತ್ತಿದೆ.
ಕಳೆದ ಎರಡು ತಿಂಗಳಿಂದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (SAI)ದಲ್ಲಿ ಎಲ್ಲಾ ಹಾಕಿ ಕ್ರೀಡಾಪಟುಗಳು ಕಾಲ ಕಳೆದಿದ್ದಾರೆ. ಅವರೆಲ್ಲರೂ ಕೋವಿಡ್-19 ಬ್ರೇಕ್ ಮುಗಿಸಿ ಇಲ್ಲಿನ ಹೊರಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಹಾಕಿ ಇಂಡಿಯಾ ಮತ್ತು ಸಾಯ್ ಕ್ರೀಡಾಳುಗಳ ಅಭ್ಯಾಸದ ಮೇಲೆ ಕಣ್ಣಿಟ್ಟಿದೆ.
ಕಳೆದೆರಡು ತಿಂಗಳ ಕಾಲ ಹಾಸ್ಟೆಲ್ ಕೊಠಡಿಯಲ್ಲಿ ಕೇವಲ ಫಿಟ್ನೆಸ್ ವ್ಯಾಯಾಮಗಳನ್ನು ಮಾಡುತ್ತಿದ್ದೆವು. ಮೈದಾನಕ್ಕೆ ಹಿಂತಿರುಗಿದಾಗ ನಾವು ಫಿಟ್ ಆಗಿರಲಿಲ್ಲ. ನಮ್ಮ ದೇಹದ ಮೇಲೆ ಹೆಚ್ಚು ಒತ್ತಡ ಹೇರದೆ ತುಂಬಾ ಸರಳವಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದೇವೆ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು, ಸಣ್ಣ ಸಣ್ಣ ಗುಂಪುಗಳಾಗಿ ಅಭ್ಯಾಸ ಆರಂಭಿಸಿದ್ದೇವೆ. ಇದಕ್ಕೂ ಮೊದಲು ನಾವು ಸೆಷನ್‌ಗಳ ಮಧ್ಯೆ ಎಂದೂ ಕೈಗಳಿಗೆ ಸ್ಯಾನಿಟೈಸರ್ ಬಳಸುತ್ತಿರಲಿಲ್ಲ. ಕುಡಿಯುವ ನೀರನ್ನೂ ಸಾಮೂಹಿಕವಾಗಿ ಬಳಸುತ್ತಿದ್ದೆವು. ಆದರೀಗ ಆಟಗಾರರು ಪ್ರತೀ ವಿರಾಮದ ಬಳಿಕ ಸ್ಯಾನಿಟೈಸರ್ ಉಪಯೋಗಿಸುತ್ತಿದ್ದಾರೆ. ಮೈದಾನಕ್ಕೆ ಪ್ರವೇಶಿಸುವ ಮೊದಲು ಮಾತ್ರವಲ್ಲ, ಪ್ರತಿ ವಿರಾಮದ ಮಧ್ಯೆಯೂ ಸ್ಯಾನಿಟೈಸರ್ ಬಳಕೆ ಮತ್ತು ಪ್ರತ್ಯೇಕ ಬಾಟಲಿಗಳನ್ನು ಒಯ್ಯುತ್ತಿದ್ದೇವೆ ಎಂದಿದ್ದಾರೆ.
ಸುರಕ್ಷತಾ ಮಾನದಂಡಗಳ ಪ್ರಕಾರ, ಪ್ರತಿದಿನ ದೇಹದ ಉಷ್ಣಾಂಶ ತಪಾಸಣೆ ಮಾಡಲಾಗುತ್ತದೆ. ನಿಯಮಿತವಾಗಿ ತಮ್ಮ ಹಾಕಿ ಸ್ಟಿಕ್ಗಳ ಗ್ರಿಪ್ಪರ್ಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಮನ್‌ಪ್ರೀತ್ ಸಿಂಗ್ ವಿವರಿಸಿದರು.
ಟೋಕಿಯೊ ಒಲಿಂಪಿಕ್ಸ್ ಕೊರೊನಾ ವೈರಸ್ ಭೀತಿಯಿಂದ ಮುಂದೂಡಲ್ಪಟ್ಟ ಕಾರಣ ಅಭ್ಯಾಸಕ್ಕೆ ಹೆಚ್ಚಿನ ಸಮಯ ದೊರೆತಿದೆ ಎಂದು ತಿಳಿಸಿರುವ ಮನ್‌ಪ್ರೀತ್, ಅಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದೇ ತಮ್ಮ ಗುರಿ ಎಂದು ಹೇಳಿದರು. ಮುಂದಿನ ಕೆಲವೇ ತಿಂಗಳಲ್ಲಿ ನಮ್ಮ ವೈಯಕ್ತಿಕ ಪ್ರದರ್ಶನದಲ್ಲಿ ಭಾರಿ ಸುಧಾರಣೆ ಆಗಬೇಕಿದೆ. ನಮ್ಮ ಗುರಿ ಟೋಕಿಯೊ ಒಲಿಂಪಿಕ್ಸ್. ಇಲ್ಲಿ ಉತ್ತಮ ನಿರ್ವಹಣೆ ನೀಡಲು ನಮ್ಮೆಲ್ಲರ ಪ್ರಯತ್ನ ಸಾಗಲಿದೆ ಎಂದರು.