ನವಿಮುಂಬೈ:ಶೆಫಾಲಿ ವರ್ಮಾ ಅವರ ಸ್ಫೋಟಕ ಅಜೇಯ ಅರ್ಧಶತಕ ಮತ್ತು ಮಾರಿಯಾನ್ನೆ ಕಾಪ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 10 ವಿಕೆಟ್‌ಗಳ ಬೃಹತ್ ಗೆಲುವು ಸಾಧಿಸಿದೆ. ಡೆಲ್ಲಿಗೆ ಇದು ಮೂರನೇ ಗೆಲುವಾದರೆ, ಗುಜರಾತ್ಗೆ ಮೂರನೇ ಸೋಲಾಯಿತು. ಈ ಮೂಲಕ ಗುಜರಾತ್ ಸೆಮಿಫೈನಲ್ ಹಾದಿ ಕಠಿಣವಾಗಿದೆ.
ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಅಕ್ಷರಶಃ ಡೆಲ್ಲಿ ಆಟಗಾರ್ತಿಯರು ಪ್ರಾಬಲ್ಯ ಸಾಧಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ಗೆ ಮೊದಲ ಓವರ್ನ 2ನೇ ಎಸೆತದಲ್ಲೇ ಪತನದ ಮುನ್ಸೂಚನೆ ಸಿಕ್ಕಿತು. ಆರಂಭಿಕ ಆಟಗಾರ್ತಿ ಮೇಘನಾರನ್ನು ಮಾರಿಯಾನೆ ಕಾಪ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ಇದಾದ ಬಳಿಕ ಸತತ ಮೂರು ವಿಕೆಟ್ ಪಡೆದ ಕಾಪ್ ಡೆಲ್ಲಿಗೆ ಅದ್ಭುತ ಆರಂಭ ನೀಡಿದರು. ಕಾಪ್ ತಮ್ಮ ಕೋಟಾದ 4 ಓವರ್‌ಗಳಲ್ಲಿ 15 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು.
ಸತತ ವಿಕೆಟ್ ಪತನ:ಡೆಲ್ಲಿ ಬೌಲಿಂಗ್ ದಾಳಿ ಹೇಗಿತ್ತೆಂದರೆ, ಅಜಮಾಸು ಪ್ರತಿ 10 ರನ್ಗೆ ಒಂದು ವಿಕೆಟ್ ಕಿತ್ತಿತು. ಟೂರ್ನಿಯ ಅತ್ಯಧಿಕ ಸ್ಕೋರರ್ಗಳಲ್ಲಿ ಒಬ್ಬರಾಗಿರುವ ಹರ್ಲಿನ್ ಡಿಯೋಲ್ 14 ಎಸೆತಗಳಲ್ಲಿ 20 ರನ್, ಗಾರ್ಜಿಯಾ ವಾರೆಹೆಮ್ 22, ಕಿಮ್ ಗರ್ಥ್ 32 ತನುಜಾ ಕನ್ವರ್ 13 ರನ್ ಗಳಿಸಿದರೆ, ಉಳಿದ ಆಟಗಾರ್ತಿಯರು ಒಂದಂಕಿ ಕೂಡ ದಾಟಲಿಲ್ಲ. ಇದರಿಂದ ತಂಡ ಸತತ ಕುಸಿತ ಕಾಣುತ್ತಾ 9 ವಿಕೆಟ್ಗೆ 105 ರನ್ಗಳಿಗೆ ಸರ್ವಪತನ ಕಂಡಿತು. ಕಾಪ್ಗೆ ಉತ್ತಮ ಬೆಂಬಲ ನೀಡಿದ ಅನುಭವಿ ಬೌಲರ್ ಶಿಖಾ ಪಾಂಡೆ 3 ವಿಕೆಟ್ ಕಿತ್ತರು.
7 ಓವರ್‌ಗಳಲ್ಲಿ 6 ವಿಕೆಟ್:ಗುಜರಾತ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ 7 ಓವರ್‌ಗಳಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಈ ವೇಳೆ ತಂಡ ಗಳಿಸಿದ್ದು 3 ರನ್ ಮಾತ್ರ. 50 ರನ್ಗೆ ಆಲೌಟ್ ಆಗುವ ಭೀತಿಯಲ್ಲಿದ್ದ ತಂಡಕ್ಕೆ ಕಿಮ್ ಗರ್ಥ್ ಮತ್ತು ಜಾರ್ಜಿಯಾ ವಾರೆಹೆಮ್ ತಂಡಕ್ಕೆ ಅಗತ್ಯವಿರುವ ರನ್‌ಗಳನ್ನು ಗಳಿಸಲು ಪ್ರಯತ್ನಿಸಿದರು. 37 ಎಸೆತಗಳನ್ನು ಎದುರಿಸಿದ ಕಿಮ್ ಗರ್ಥ್ 32 ರನ್ ಮಾಡಿದರೆ, 25 ಬಾಲ್ಗಳಲ್ಲಿ ವಾರೆಹೆಮ್ 22 ರನ್ ಮಾಡಿ ಪ್ರತಿರೋಧ ತೋರಿದರು. ಆದರೆ ಇವರ ಪ್ರಯತ್ನಗಳನ್ನು ಮಾರಿಯಾನ್ ಕಾಪ್ ಮತ್ತು ಶಿಖಾ ಪಾಂಡೆ ಮುಂದುವರಿಸಲು ಬಿಡಲಿಲ್ಲ.