ನವದೆಹಲಿ:ಬಾಂಗ್ಲಾದೇಶ ವಿರುದ್ಧ ಮೀರ್ಪುರ್ನಲ್ಲಿ ಇತ್ತೀಚೆಗೆ ನಡೆದ ದ್ವಿತೀಯ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತೀಯ ಕ್ರಿಕೆಟ್ ತಂಡ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಸ್ಥಾನಕ್ಕೆ ಮತ್ತಷ್ಟು ಸನಿಹವಾಗಿದೆ. 2021ರಲ್ಲಿ ಸೌತಾಂಪ್ಟನ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕನಸು ಭಗ್ನವಾಗಿತ್ತು.
ಇತ್ತೀಚೆಗೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಮತ್ತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟ ಕಟ್ಟಿಕೊಳ್ಳುವ ಸಮೀಪದಲ್ಲಿದೆ. ಆದರೆ, ಕೆಲವು ತಂಡಗಳ ಸೋಲು ಪರೋಕ್ಷವಾಗಿ ಇನ್ನುಳಿದ ಕೆಲವು ತಂಡಗಳಿಗೆ ವರದಾನವಾಗುವ ಸಂಭವವೂ ಇದೆ. ಹಾಗೆಯೇ ಇದು ಮುಳುವೂ ಕೂಡಾ ಆಗಬಹುದು. ಇದನ್ನು ಗಮನಿಸಿದರೆ, ಭಾರತ ತಂಡಕ್ಕೆ ಚಾಂಪಿಯನ್ಶಿಪ್ ಅಷ್ಟು ಸುಲಭದ ಸವಾಲಲ್ಲ ಅನ್ನೋದು ಸದ್ಯದ ಲೆಕ್ಕಾಚಾರ.
ಲೇಟೆಸ್ಟ್ ಪಾಯಿಂಟ್ ಪಟ್ಟಿ ನೋಡುವುದಾದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಣಾಹಣಿ ನಿಗದಿಯಾದಂತಿದೆ. ಇದರ ನಡುವೆ ಪೈಪೋಟಿ ಸ್ಥಾನದಲ್ಲಿರುವ ಬಲಿಷ್ಟ ದಕ್ಷಿಣ ಆಫ್ರಿಕಾ (ಆಸ್ಟ್ರೇಲಿಯಾ ವಿರುದ್ಧ) ಮತ್ತು ಶ್ರೀಲಂಕಾ (ನ್ಯೂಜಿಲೆಂಡ್ ವಿರುದ್ಧ) ತಂಡಗಳು ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಗಳಲ್ಲಿ ತಮಗೆ ನೀಡಿದ ಸವಾಲುಗಳನ್ನು ಹಿಮ್ಮೆಟ್ಟಿಸಿದರೆ ಈ ಸ್ಥಾನಗಳು ಅದಲು-ಬದಲಾಗುವ ಸಾಧ್ಯತೆಯೂ ಇದೆ. ಇದರ ಹೊರತಾಗಿಯೂ ಒಂದು ವೇಳೆ ಭಾರತೀಯ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟ ಕಷ್ಟಸಾಧ್ಯ ಎನ್ನಲಾಗುತ್ತಿದೆ. ಹಾಗಾಗಿ ಭಾರತ ಮುಂದಿನ ಹಾದಿಯನ್ನು ಸುಲಭಗೊಳಿಸಿಕೊಳ್ಳಬೇಕು.
ಫೈನಲ್ಗೆ ಸುಲಭ ಪ್ರವೇಶ: ICC ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಅಗ್ರ 9 ಟೆಸ್ಟ್ ಆಡುವ ತಂಡಗಳ ನಡುವೆ ಎರಡು ವರ್ಷಗಳ ಲೀಗ್ನಂತೆ ಆಡಿಸಲಾಗುತ್ತದೆ. ನಂತರ 2 ತಂಡಗಳ ನಡುವೆ ನಾಕೌಟ್ ಫೈನಲ್ ನಡೆಯುತ್ತದೆ. ಇದೀಗ ಆ ಅವಕಾಶ ಕೂಡಿ ಬಂದಿದೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಫೈನಲ್ಗೆ ಸುಲಭವಾಗಿ ಪ್ರವೇಶ ಪಡೆಯಲಿದೆ. ಆದರೆ, ಇದು ಅಷ್ಟು ಸುಲಭದ ಕೆಲಸವೂ ಅಲ್ಲ ಎಂಬ ಮಾತೂ ಸಹ ಕೇಳಿಬರುತ್ತಿದೆ.
ತನ್ನ ಸ್ಥಾನ ಭದ್ರಪಡಿಸಿರುವ ಆಸ್ಟ್ರೇಲಿಯಾ:ಆಸ್ಟ್ರೇಲಿಯಾ ತಂಡ ಶೇ.76.92 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಭಾರತ ಶೇ.58.93 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಶೇ. 54.55 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಶೇ. 53.33 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಶೇ. 44.44 ಅಂಕ ಹೊಂದಿರುವ ಇಂಗ್ಲೆಂಡ್ಗೆ ಸ್ಥಾನ ದಕ್ಕಿದೆ. ಒಂದು ತಂಡದ ಗೆಲುವಿಗೆ 12 ಅಂಕಗಳನ್ನು ನೀಡಲಾಗುತ್ತದೆ. ಟೈ ಆದರೆ ಆರು ಅಂಕಗಳನ್ನೂ ಮತ್ತು ಡ್ರಾ ಆದರೆ ನಾಲ್ಕು ಅಂಕಗಳನ್ನು ನೀಡಲಾಗುತ್ತದೆ. ಆಸ್ಟ್ರೇಲಿಯಾ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇನ್ನೂ ಆರು ಪಂದ್ಯಗಳನ್ನು ಆಡಬೇಕಿದೆ.