ಕೋಲ್ಕತ್ತಾ (ಪಶ್ಚಿಮ ಬಂಗಾಳ):ವಿಶ್ವ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಹಲವಾರು ಜನರಿಗೆ ಸ್ಪೂರ್ತಿ ಆಗಿದ್ದಾರೆ. ಅದರಲ್ಲೂ ಭಾರತದ ಆಟಗಾರರಿಗೆ ಸಚಿನ್ ಓರ್ವ ಕ್ರಿಕೆಟ್ ದಂತಕಥೆ. ಅವರು ಕ್ರಿಕೆಟ್ನಲ್ಲಿ ಮಾಡದ ದಾಖಲೆ, ಸಾಧನೆಗಳಿಲ್ಲ ಎಂದೇ ಹೇಳಬಹುದು. ಶತಕಗಳ ಸಂಖೆ, ದ್ವಿಶತಕ ಸಿಡಿಸಿದ ಮೊದಲಿಗ, ಒಟ್ಟಾರೆ ಅಂತಾರಾಷ್ಟ್ರೀಯ ಮೊತ್ತ, ಫಾರ್ಮ್ ಇಲ್ಲಾ ಎಂಬ ಕಾರಣದಿಂದ ಈ ವ್ಯಕ್ತಿ ಒಮ್ಮೆಯೂ ತಂಡದಿಂದ ಹೊರಗುಳಿದಿರಲಿಲ್ಲ. ಇಂತಹ ಆಟಗಾರ ಯಾರಿಗೆ ಪ್ರೇರಣೆ ಆಗದಿರಲು ಸಾಧ್ಯವಿಲ್ಲ ಹೇಳಿ.
ಈ ಎಲ್ಲಾ ಕಾರಣಗಳಿಂದ ವಿರಾಟ್ ಕೊಹ್ಲಿಗೆ ಸಚಿನ್ ಸ್ಪೂರ್ತಿ ಆಗಿದ್ದರು. ಬಾಲ್ಯದಲ್ಲಿ ಸಚಿನ್ ಆಟವನ್ನು ವಿರಾಟ್ ಟಿವಿಯಲ್ಲಿ ನೋಡಿ ಪ್ರೇರಣೆ ಪಡೆದಿದ್ದರು. ಇಂದು ಕೊಹ್ಲಿ ಅವರ ದಾಖಲೆಗಳಲ್ಲಿ ಕೆಲವನ್ನು ಬ್ರೇಕ್ ಮಾಡಿದರೆ, ಇನ್ನೂ ಕೆಲವನ್ನು ಸರಿಗಟ್ಟಿದ್ದಾರೆ. ವಿಶ್ವಕಪ್ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ವಿರಾಟ್ ಸಚಿನ್ರ ಒಂದು ಮೈಲಿಗಲ್ಲನ್ನು ತಲುಪಿ ಸಮನಾಗಿಸಿಕೊಂಡಿದ್ದಾರೆ. ವಿರಾಟ್ರ ಈ ಬೆಳವಣಿಗೆಗೆ ಸ್ವತಃ ಸಚಿನ್ ಶುಭಕೋರಿ ಹಾರೈಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 101 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 49ನೇ ಶತಕ ಗಳಿಸಿದ ದಾಖಲೆ ಮಾಡಿದರು. ಜಾಗತಿಕ ಕ್ರಿಕೆಟ್ನಲ್ಲೂ ವಿರಾಟ್ ಮತ್ತು ಸಚಿನ್ ಜಂಟಿಯಾಗಿ ಅತಿಹೆಚ್ಚು ಶತಕ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿಯ ಈ 'ವಿರಾಟ' ಇನ್ನಿಂಗ್ಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿದೆ.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ವಿರಾಟ್ ಕೊಹ್ಲಿ,"ನನ್ನ ಹೀರೋ (ಸಚಿನ್ ತೆಂಡೂಲ್ಕರ್) ದಾಖಲೆಯನ್ನು ಸರಿಗಟ್ಟುವುದು ನನಗೆ ಈಗ ತುಂಬಾ ದೊಡ್ಡ ವಿಚಾರವಾಗಿದೆ. ಸಚಿನ್ ತೆಂಡೂಲ್ಕರ್ ಪರಿಪೂರ್ಣರಾಗಿದ್ದಾರೆ. ಅವರ ದಾಖಲೆಯನ್ನು ಸಮನಾಗಿಸಿದ್ದೇನೆ ಎಂಬುದು ನನಗೆ ಹೆಮ್ಮೆಯ ವಿಚಾರ. ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ, ನಾನು ಎಲ್ಲಿಂದ ಬಂದಿದ್ದೇನೆ ಎಂದು ನನಗೆ ತಿಳಿದಿದೆ, ನಾನು ಅವರನ್ನು (ಸಚಿನ್ ತೆಂಡೂಲ್ಕರ್) ಟಿವಿಯಲ್ಲಿ ನೋಡಿದ ದಿನಗಳು ನನಗೆ ತಿಳಿದಿದೆ. ಅವರಿಂದ ಆ ಮೆಚ್ಚುಗೆಯನ್ನು ಪಡೆಯುವುದು ನನಗೆ ಬಹಳಷ್ಟು ಅರ್ಥವಾಗಿದೆ" ಎಂದು ಹೇಳಿದ್ದಾರೆ.