ಬೆಂಗಳೂರು: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಬೆಂಗಳೂರಿನಲ್ಲಿ ನಿರ್ಮಾಣ ಆಗಲಿರುವ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಶಂಕುಸ್ಥಾಪನೆ ನೆರವೇರಿಸಿದರು. ಮುಂದಿನ ವರ್ಷ ಈ ಐಶಾರಾಮಿ ಕ್ರೀಡಾಂಗಣ ಲಭ್ಯವಾಗಲಿದೆ.
ಈ ನೂತನ ಅಕಾಡೆಮಿಗೆ ಕರ್ನಾಟಕ ಸರ್ಕಾರದಿಂದ 99 ವರ್ಷಕ್ಕೆ ಜಮೀನು ಗುತ್ತಿಗೆ ಪಡೆದು ಅಕಾಡೆಮಿ ಸ್ಥಾಪಿಸಲಾಗಿದೆ. ಇದರಲ್ಲಿ ದೇಶೀಯ ಪಂದ್ಯಗಳನ್ನು ಆಯೋಜಿಸಲು ಮೂರು ಮೈದಾನಗಳನ್ನು ಸಿದ್ಧಪಡಿಸಲಾಗುತ್ತದೆ.
ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕಾರ್ಯಕ್ಕೆ ನಾವು ಇಂದು ಶಂಕು ಸ್ಥಾಪನೆ ನೆರವೇರಿಸಿದ್ದೇವೆ ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
"ಬಿಸಿಸಿಐ ನೇತೃತ್ವದ ನೂತನ ಕ್ರಿಕೆಟ್ ಅಕಾಡೆಮಿಗೆ ಅಡಿಗಲ್ಲು ಹಾಕಲಾಗಿದೆ. ಯುವ ಆಟಗಾರರನ್ನು ಪ್ರೋತ್ಸಾಹಿಸುವುದರ ಹೊರತಾಗಿ, ಭಾರತದಲ್ಲಿ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸಲು ನಾವೆಲ್ಲರೂ ತೆಗೆದುಕೊಂಡ ಸಾಮೂಹಿಕ ನಿರ್ಧಾರವಾಗಿದೆ ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್, ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್, ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಪ್ರಸ್ತುತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯಾಂಪ್ ಆಯೋಜಿಸುತ್ತಿದೆ. ಇದನ್ನು 2000ರಲ್ಲಿ ಸ್ಥಾಪಿಸಲಾಯಿತು. ಇದಕ್ಕಾಗಿ ಬಿಸಿಸಿಐ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್ಸಿಎ) ಬಾಡಿಗೆ ನೀಡುತ್ತಿದೆ. ಇದು ಹೊರಾಂಗಣ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಮತ್ತು ಆಧುನಿಕ ಜಿಮ್ನಾಷಿಯಂನಂತಹ ಸೌಲಭ್ಯಗಳನ್ನು ಹೊಂದಿದೆ.
ಇದನ್ನೂ ಓದಿ:ವಿಂಡೀಸ್ ವಿರುದ್ಧದ ಟಿ-20 ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್, ಕುಲ್ದೀಪ್ಗೆ ಬುಲಾವ್