ಜಿಂಬಾಬ್ವೆ: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಈ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ ಸುತ್ತಿನ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸ್ಕಾಟ್ಲೆಂಡ್ ಏಳು ವಿಕೆಟ್ ಗಳಿಂದ ಸೋಲಿಸಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸ್ಕಾಟ್‌ಲೆಂಡ್‌ಗೆ ನೀಡಿದ್ದ 182 ರನ್‌ಗಳ ಗುರಿಯನ್ನು ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು.
ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿರುವುದು ಕೆರಿಬಿಯನ್ ಕ್ರಿಕೆಟ್‌ಗೆ ಭಾರಿ ಮುಖಭಂಗವಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವು ಏಕದಿನ ವಿಶ್ವಕಪ್‌ನ ಭಾಗವಾಗುವುದಿಲ್ಲ. ಈ ಹಿಂದೆ ವಿಂಡೀಸ್ ಏಕದಿನ ವಿಶ್ವಕಪ್‌ನ ಎಲ್ಲ 12 ಆವೃತ್ತಿಗಳಲ್ಲಿ ಭಾಗವಹಿಸಿತ್ತು. 1975 ಮತ್ತು 1979 ರ ವಿಶ್ವಕಪ್‌ಗಳಲ್ಲಿ, ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ವಿಂಡೀಸ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 43.5 ಓವರ್ ಗಳಲ್ಲಿ ಕೇವಲ 181 ರನ್ ಗಳಿಗೆ ಸರ್ವಪತನ ಕಂಡಿತು. ವಿಂಡೀಸ್ ಪರ ಜೇಸನ್ ಹೋಲ್ಡರ್ ಮತ್ತು ರೊಮಾರಿಯೊ ಶೆಫರ್ಡ್ ಮಾತ್ರ ಸ್ವಲ್ಪ ಮಟ್ಟಿಗೆ ಹೋರಾಟ ನಡೆಸಿದರು. ಹೋಲ್ಡರ್ 79 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡ 45 ರನ್ ಗಳಿಸಿದರು. ಶೆಫರ್ಡ್ 43 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 36 ರನ್ ಗಳಿಸಿದರು. ಸ್ಕಾಟ್ಲೆಂಡ್ ಪರ ಬ್ರ್ಯಾಂಡನ್ ಮೆಕ್‌ಮುಲ್ಲೆನ್ ಗರಿಷ್ಠ ಮೂರು ವಿಕೆಟ್ ಪಡೆದರು. ಆದರೆ ಕ್ರಿಸ್ ಸೋಲ್, ಮಾಕ್ ವ್ಯಾಟ್ ಮತ್ತು ಕ್ರಿಸ್ ಗ್ರೀವ್ಸ್ ತಲಾ ಎರಡು ವಿಕೆಟ್ ಪಡೆದರು.