ಬಾರ್ಬಡೋಸ್:ತವರಿನಲ್ಲಿ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಇನ್ನೂ ಪ್ರಯೋಗ ನಡೆಸುತ್ತಿರುವ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ ಪಂದ್ಯದಲ್ಲಿ ಭಾರತದ ಕಳಪೆ ಬ್ಯಾಟಿಂಗ್ನಿಂದಾಗಿ ವಿಂಡೀಸ್ 6 ವಿಕೆಟ್ಗಳ ಗೆಲುವು ಸಾಧಿಸಿತು. ಈ ಮೂಲಕ ಭಾರತದ ವಿರುದ್ಧ 2019ರ ಬಳಿಕ ಮೊದಲ, ತವರಿನಲ್ಲಿ 6 ವರ್ಷಗಳ ನಂತರ ಪ್ರಥಮ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ಹಲವು ಬಾರಿ ಮಳೆ ಅಡ್ಡಿ ನಡುವೆ ಬ್ಯಾಟಿಂಗ್ ವೈಫಲ್ಯ ಕಂಡು 40.5 ಓವರ್ಗಳಲ್ಲಿ ಕೇವಲ 181 ರನ್ ಮಾತ್ರ ಗಳಿಸಿತು. ಇದಕ್ಕುತ್ತರವಾಗಿ ಕೆರಿಬಿಯನ್ ತಂಡದ ನಾಯಕ ಶಾಯ್ ಹೋಪ್ರ ಅಜೇಯ ಅರ್ಧಶತಕ ಬಲದಿಂದ ನಿರಾಯಾಸವಾಗಿ 36.4 ಓವರ್ಗಳಲ್ಲಿ 4 ವಿಕೆಟ್ಗೆ ನಷ್ಟಕ್ಕೆ ಗುರಿ ದಾಟಿ ಸರಣಿಯನ್ನು 1-1ರಲ್ಲಿ ಸಮಬಲ ಮಾಡಿಕೊಂಡಿತು.
'ಹೋಪ್' ಕಳೆದುಕೊಳ್ಳದ ವಿಂಡೀಸ್:ಮೊದಲ ಏಕದಿನದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೀಡಾಗಿದ್ದ ವಿಂಡೀಸ್ ಈ ಪಂದ್ಯದಲ್ಲಿ ಚೇತರಿಕೆಯ ಪ್ರದರ್ಶನ ನೀಡಿತು. ಭಾರತದ 181 ರನ್ಗಳ ಸಾಧಾರಣ ಗುರಿಯನ್ನು ನಾಯಕ ಶಾಯ್ ಹೋಪ್ರ ಅಜೇಯ ಅರ್ಧಶತಕ, ಕೀಸಿ ಕಾರ್ಟಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಲೀಸಾಗಿಯೇ ಮುಟ್ಟಿತು. ಬ್ರೆಂಡನ್ ಕಿಂಗ್ 15, ಕೈಲ್ ಮೇಯರ್ಸ್ 36 ರನ್ ಕಾಣಿಕೆ ನೀಡಿ ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟ ನೀಡಿದರು.
ಇದಾದ ಬಳಿಕ ಶಾಯ್ ಹೋಪ್ ಮತ್ತು ಕೀಸಿ ಕಾರ್ಟಿ ಬ್ಯಾಟಿಂಗ್ ಹೊಣೆ ಹೊತ್ತರು. 80 ಎಸೆತಗಳಲ್ಲಿ ತಲಾ 2 ಸಿಕ್ಸರ್, ಬೌಂಡರಿಗಳಸಮೇತ ಹೋಪ್ ಅಜೇಯ 63 ರನ್ ಬಾರಿಸಿದರೆ, ಕೀಸಿ ಕಾರ್ಟಿ 4 ಬೌಂಡರಿಗಳಿಂದ ಅಜೇಯ 48 ರನ್ ಮಾಡಿ 2 ರನ್ನಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ಬ್ಯಾಟಿಂಗ್ನಲ್ಲಿ 16 ರನ್‌ಗಳಿಂದ ನೆರವಾಗಿದ್ದ ಶಾರ್ದೂಲ್ ಠಾಕೂರ್ 3 ವಿಕೆಟ್ ಕೆಡವಿ ಮಿಂಚಿದರು.