ಲಾಹೋರ್: ಭದ್ರತಾ ಬೆದರಿಕೆಯ ಕಾರಣ ನೀಡಿ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿರುವ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳ ವಿರುದ್ಧ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಕಿಡಿ ಕಾರಿದ್ದಾರೆ.
ಮುಂಬರುವ ವಿಶ್ವಕಪ್ನಲ್ಲಿ ಎರಡೂ ತಂಡಗಳನ್ನು ಬಗ್ಗುಬಡಿದು ಸೇಡು ತೀರಿಸಿಕೊಳ್ಳಿ ಎಂದು ನಾಯಕ ಬಾಬರ್ ಅಜಮ್ಗೆ ತಿಳಿಸಿದ್ದಾರೆ.
ಇದ್ರ ಜೊತೆಗೆ ಎರಡು ರಾಷ್ಟ್ರಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಮುಂಬರುವ ವಿಶ್ವಕಪ್ನಲ್ಲಿ ಸೇಡು ತೀರಿಸಿಕೊಳ್ಳಿ ಎಂದು ತಂಡಕ್ಕೆ ಕರೆ ಕೊಟ್ಟಿದ್ದಾರೆ.
ಇಂಗ್ಲೆಂಡ್ ಕೂಡ ನಿರಾಕರಿಸಿದೆ. ಪರವಾಗಿಲ್ಲ ಹುಡುಗರೇ, ಟಿ20 ವಿಶ್ವಕಪ್ನಲ್ಲಿ ಎಲ್ಲರೂ ಸಿಗೋಣ. ವಿಶೇಷವಾಗಿ ಬ್ಲಾಕ್ಕ್ಯಾಪ್ಸ್(ನ್ಯೂಜಿಲ್ಯಾಂಡ್). ಇದು ಪಂಜು ಬೀಸುವ ಸಮಯ, ಅವರನ್ನು ಬಿಟ್ಟುಕೊಡಬೇಡಿ ಬಾಬರ್ ಅಜಮ್ ಎಂದು ಟ್ವಿಟರ್ನಲ್ಲಿ ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ನಮಗೆ ಭಾರತದ ವಿರುದ್ಧ ಪಂದ್ಯವಿದೆ. ಅದಕ್ಕಿಂತಲೂ ಮುಖ್ಯವಾದ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧದ್ದು. ಆ ಪಂದ್ಯದಲ್ಲಿ ನಾವು ನಮ್ಮ ಕೋಪವನ್ನು ಹೊರಹಾಕಬೇಕಿದೆ. ಇದಕ್ಕೂ ಮೊದಲು ಪಿಸಿಬಿ ಸರಿಯಾದ ಆಯ್ಕೆ ಮಾಡಬೇಕು. ತಂಡ ಬಲಗೊಳ್ಳಲು ಅಗತ್ಯವಿರುವ 3-4 ಆಟಗಾರರನ್ನು ಸೇರಿಸಿಕೊಳ್ಳಬೇಕು. ನಾವು ಏನನ್ನೂ ಮಾತನಾಡದೇ ವಿಶ್ವಕಪ್ ಗೆಲ್ಲುವ ಮೂಲಕ ಇವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳೋಣ ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮೈದಾನದಲ್ಲಿ ಸೇಡು ತೀರಿಸಿಕೊಳ್ಳುತ್ತೇವೆ : ಇಂಗ್ಲೆಂಡ್-ನ್ಯೂಜಿಲ್ಯಾಂಡ್ ವಿರುದ್ಧ ಗುಡುಗಿದ ರಮೀಜ್ ರಾಜಾ