ನವದೆಹಲಿ:ದುಬೈನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಮುಕ್ತಾಯಗೊಳ್ತಿದ್ದಂತೆ ಕೊಹ್ಲಿ ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿರಲಿದ್ದಾರೆ. ರೋಹಿತ್ ಶರ್ಮಾ ಟಿ-20 ಹಾಗೂ ಏಕದಿನ ಕ್ರಿಕೆಟ್ನ ಕ್ಯಾಪ್ಟನ್ ಆಗಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಸಿಸಿಐ, ಆ ರೀತಿಯ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿತ್ತು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ದುಬೈನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಐಸಿಸಿ ಟಿ-20 ವಿಶ್ವಕಪ್ ಟೂರ್ನಮೆಂಟ್ ಆಯೋಜನೆಗೊಂಡಿದ್ದು, ಟೀಂ ಇಂಡಿಯಾ ಅಕ್ಟೋಬರ್ 24ರಂದು ಪಾಕ್ ವಿರುದ್ದ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ. ಟಿ-20 ಕ್ರಿಕೆಟ್ ನಾಯಕತ್ವದಿಂದ ಮಾತ್ರ ಕೆಳಗಿಳಿಯುವುದಾಗಿ ಘೋಷಣೆ ಮಾಡಿರುವ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ ಮುಂದುವರೆಯಲಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಟಿ-20 ನಾಯಕತ್ವ ಸ್ಥಾನ ರೋಹಿತ್ ಶರ್ಮಾಗೆ ನೀಡುವ ಸಾಧ್ಯತೆ ಇದೆ.
ವಿರಾಟ್ ಟ್ವೀಟ್ನಲ್ಲಿ ಏನಿದೆ?
ದುಬೈನಲ್ಲಿ ಆಯೋಜನೆಗೊಂಡಿರುವ ಟಿ-20 ವಿಶ್ವಕಪ್ ಮುಕ್ತಾಯದ ಬಳಿಕ ನಾನು ಟಿ-20 ಕ್ರಿಕೆಟ್ ನಾಯಕತ್ವ ತ್ಯಜಿಸುತ್ತಿದ್ದೇನೆ. ಆದರೆ ಬ್ಯಾಟ್ಸ್ಮನ್ ಆಗಿ ಮುಂದುವರೆಯಲಿದ್ದೇನೆ. ಕಳೆದ 8-9 ವರ್ಷಗಳಿಂದ ಮೂರು ಮಾದರಿ ಕ್ರಿಕೆಟ್ನಲ್ಲಿ ಆಡುತ್ತಿರುವುದು ಹಾಗೂ ಮೂರು ಮಾದರಿ ಕ್ರಿಕೆಟ್ನಲ್ಲಿ 5-6 ವರ್ಷಗಳಿಂದ ನಾಯಕತ್ವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಈ ನಿರ್ಧಾರದ ಬಗ್ಗೆ ಕೋಚ್ ರವಿಶಾಸ್ತ್ರಿ ಹಾಗು ರೋಹಿತ್ ಶರ್ಮಾ ಜೊತೆ ಸಾಕಷ್ಟು ಮಾತುಕತೆ ನಡೆಸಿದ್ದೇನೆ. ಇದ್ರ ಜೊತೆಗೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗು ಕಾರ್ಯದರ್ಶಿ ಜಯ್ ಶಾ ಅವರಿಗೂ ನನ್ನ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.
2017ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ನಾಯತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. 45 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಮುನ್ನಡೆಸಿರುವ ವಿರಾಟ್ ನೇತೃತ್ವದ ಟೀಂ ಇಂಡಿಯಾ 29 ಪಂದ್ಯಗಳಲ್ಲಿ ಗೆಲುವು ಹಾಗೂ 14 ಪಂದ್ಯಗಳಲ್ಲಿ ಸೋಲು ಕಂಡಿದೆ.