ಕರ್ನಾಟಕ

karnataka

ETV Bharat / sports

ಟಿ-20 ಕ್ರಿಕೆಟ್​ನಲ್ಲಿ ​ಚೇಸ್​ ಮಾಸ್ಟರ್​ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು - Virat Kohli record in T20 cricket

ವಿಶ್ವ ಕ್ರಿಕೆಟ್​ನ ಈ ಪೀಳಿಗೆಯ ಸ್ಟಾರ್​ ಆದ ವಿರಾಟ್​ ಕೊಹ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ. ಎಲ್ಲ ಮಾದರಿಯ ಟಿ-20 ಕ್ರಿಕೆಟ್​ನಲ್ಲಿ ಅತಿಹೆಚ್ಚು ರನ್​ ಗಳಿಸಿದ ಆಟಗಾರರಲ್ಲಿ ವಿರಾಟ್​ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಹೊಸ ಮೈಲುಗಲ್ಲು
ವಿರಾಟ್ ಕೊಹ್ಲಿ ಹೊಸ ಮೈಲುಗಲ್ಲು

By

Published : Apr 11, 2023, 1:09 PM IST

ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಖಾತೆಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಐಪಿಎಲ್​, ಅಂತಾರಾಷ್ಟ್ರೀಯ ಸೇರಿ ಎಲ್ಲ ಮಾದರಿಯ ಟಿ20 ಕ್ರಿಕೆಟ್​ನಲ್ಲಿ ಅತಿಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಗೌರವ ಪಡೆದ ಭಾರತದ ಮೊದಲ ಆಟಗಾರ ಎಂದೆನಿಸಿಕೊಂಡರು.

2007 ರಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವಿರಾಟ್​ ಈ ಸ್ವರೂಪದಲ್ಲಿ ಹಲವು ದಾಖಲೆ ಸೃಷ್ಟಿಸಿದ್ದಾರೆ. ಐಪಿಎಲ್​, ಅಂತಾರಾಷ್ಟ್ರೀಯ ಸೇರಿದಂತೆ ಎಲ್ಲ ಮಾದರಿಯ ಟಿ20ಯ 362 ಪಂದ್ಯಗಳಲ್ಲಿ 41.11 ಸರಾಸರಿ, 133.17 ಸ್ಟ್ರೈಕ್​ರೇಟ್‌ನೊಂದಿಗೆ 11,429 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 86 ಅರ್ಧ ಶತಕಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಔಟಾಗದೇ 122 ಅವರ ಅತ್ಯುತ್ತಮ ಸ್ಕೋರ್ ಆಗಿದೆ.

ಇನ್ನು ಗಮನಾರ್ಹವೆಂದರೆ, ಕಿಂಗ್​ ವಿರಾಟ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲಿಗ. ಅವರು 115 ಪಂದ್ಯಗಳ 107 ಇನ್ನಿಂಗ್ಸ್‌ಗಳಲ್ಲಿ 52.73 ಸರಾಸರಿಯೊಂದಿಗೆ 4,008 ರನ್ ಗಳಿಸಿದ್ದಾರೆ. 1 ಶತಕ ಮತ್ತು 37 ಅರ್ಧ ಶತಕಗಳೂ ಇದರಲ್ಲಿವೆ.

ಐಪಿಎಲ್​ ದಾಖಲೆ:ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ವಿರಾಟ್​ ಆಗಿದ್ದಾರೆ. 226 ಪಂದ್ಯಗಳಲ್ಲಿ 36.69 ಸರಾಸರಿಯಲ್ಲಿ 6,788 ರನ್ ಗಳಿಸಿದ್ದಾರೆ. ಲೀಗ್‌ನಲ್ಲಿ 5 ಶತಕಗಳು ಮತ್ತು 46 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಶಿಖರ್​ ಧವನ್​ 209 ಪಂದ್ಯಗಳಲ್ಲಿ 6469 ರನ್​ ಗಳಿಸಿ 2 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ಡೇವಿಡ್​ ವಾರ್ನರ್​ 165 ಪಂದ್ಯಗಳಲ್ಲಿ 6039, ಭಾರತ ತಂಡದ ನಾಯಕ ರೋಹಿತ್​ ಶರ್ಮಾ 229 ಪಂದ್ಯಗಳಲ್ಲಿ 5901, ಮಾಜಿ ಕ್ರಿಕೆಟಿಗ ಸುರೇಶ್​ ರೈನಾ 205 ಮ್ಯಾಚ್​ಗಳಲ್ಲಿ 5528 ರನ್​ ಗಳಿಸಿದ್ದು ನಂತರದ ಸ್ಥಾನದಲ್ಲಿದ್ದಾರೆ.

ಇನ್ನು, ವೆಸ್ಟ್ ಇಂಡೀಸ್ ಕ್ರಿಕೆಟ್​ ದಂತಕಥೆ ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 36.22 ರ ಸರಾಸರಿಯಲ್ಲಿ 14,562 ರನ್ ಗಳಿಸಿದ್ದು, ವಿಶ್ವದಲ್ಲಿಯೇ ಅತ್ಯಧಿಕ ರನ್​ ಬಾರಿಸಿದ ಆಟಗಾರರಾಗಿದ್ದಾರೆ. ಅವರು 22 ಶತಕಗಳು ಮತ್ತು 88 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಆ ಬಳಿಕ ಪಾಕಿಸ್ತಾನದ ಶೋಯೆಬ್ ಮಲಿಕ್ 510 ಪಂದ್ಯಗಳಲ್ಲಿ 77 ಅರ್ಧಶತಕಗಳೊಂದಿಗೆ 12,528 ರನ್, ವೆಸ್ಟ್ ಇಂಡೀಸ್ ದೈತ್ಯ ಕೀರಾನ್ ಪೊಲಾರ್ಡ್ 625 ಪಂದ್ಯಗಳಲ್ಲಿ 1 ಶತಕ ಮತ್ತು 58 ಅರ್ಧಶತಕಗಳೊಂದಿಗೆ 12,175 ರನ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯರೋನ್ ಫಿಂಚ್ 382 ಪಂದ್ಯಗಳಲ್ಲಿ 11,392 ರನ್ ಗಳಿಸಿದ್ದಾರೆ.

ಸೋಲು ತಪ್ಪಿಸಿಕೊಳ್ಳದ ಆರ್​ಸಿಬಿ:ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಖನೌ ಸೂಪರ್​ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ 1 ವಿಕೆಟ್​ನಿಂದ ಸೋಲು ಕಂಡಿತು. ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ, ನಾಯಕ ಫಾಪ್​ ಡು ಪ್ಲೆಸಿಸ್​, ಗ್ಲೆನ್​ ಮ್ಯಾಕ್​​​ವೆಲ್​ರ ಅಬ್ಬರ್ ಬ್ಯಾಟಿಂಗ್​ನಿಂದ ನಿಗದಿತ 20 ಓವರ್​ಗಳಲ್ಲಿ 212 ರನ್​ಗಳ ಬೃಹತ್​ ಮೊತ್ತ ಗಳಿಸಿತು. ಇದನ್ನು ಬೆನ್ನಟ್ಟಿದ ಎಲ್​ಎಸ್​ಜಿ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ಸಾಧಿಸಿತು.

ಪಂದ್ಯದಲ್ಲಿ ವಿರಾಟ್​ ಕೊಹ್ಲಿ 45 ಎಸೆತಗಳಲ್ಲಿ 61 ರನ್ ಗಳಿಸಿ ರಟ್ಟೆಯರಳಿಸಿದರು. ತಲಾ 4 ಬೌಂಡರಿ, ಸಿಕ್ಸರ್‌ ಅಟ್ಟಿದರು. ನಾಯಕ ಪ್ಲೆಸಿಸ್​ 46 ಎಸೆತಗಳಲ್ಲಿ 79 ರನ್, ಗೆಲ್ನ್​ ಮ್ಯಾಕ್ಸ್​ವೆಲ್​ 59 ರನ್​ ಮಾಡಿದರು. ಲಖನೌ ಪರವಾಗಿ ಮಿಂಚಿನ ಬ್ಯಾಟ್​ ಮಾಡಿದ ಮಾರ್ಕಸ್​​ ಸ್ಟೊಯಿನೀಸ್​ 65, ನಿಕೋಲಸ್​ ಪೂರನ್​ 62 ರನ್​ ಮಾಡಿ ತಂಡವನ್ನು ಗೆಲ್ಲಿಸಿದರು.

ಓದಿ:ವಿರುಷ್ಕಾ ಮಗಳಿಗೆ ಬೆದರಿಕೆ ಪ್ರಕರಣ: ಹೈದರಾಬಾದ್​ ಟೆಕ್ಕಿ ವಿರುದ್ಧದ ಕೇಸ್​ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್​

ABOUT THE AUTHOR

...view details