ದುಬೈ: ಭಾರತದ ಪ್ರತಿಭಾನ್ವಿತ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಆಡದಿರುವುದ ತಮಗೆ ಆಶ್ಚರ್ಯ ತಂದಿದೆ. ಭಾರತದ ಲೆಗ್ ಸ್ಪಿನ್ನರ್ ತಮ್ಮ ವೇರಿಯೇಶನ್ಗಳಿಂದ ಪಂದ್ಯದ ಗತಿಯನ್ನ ಕೆಲವೇ ನಿಮಿಷಗಳಲ್ಲಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದರು ಎಂದು ದಕ್ಷಿಣ ಆಫ್ರಿಕಾದ ಹಿರಿಯ ಬೌಲರ್ ಇಮ್ರಾನ್ ತಾಹೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿಶ್ವಕಪ್ನಲ್ಲಿ ಯಾವುದೇ ಪ್ರತಿರೋಧ ತೋರದೆ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದಂತೆ ಚಹಾಲ್ ಸೇರಿದಂತೆ ಕೆಲವು ಆಟಗಾರರನ್ನು ತಂಡದಿಂದ ಕೈಬಿಟ್ಟ ಆಯ್ಕೆಸಮಿತಿಯ ನಿರ್ಧಾರವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ದ. ಆಫ್ರಿಕಾದ ಸ್ಪಿನ್ನರ್ ತಾಹೀರ್ ಕೂಡ ಚಹಾಲ್ ವಿಶ್ವಕಪ್ ಆಡದಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಹಾಲ್ ಒಬ್ಬ ಅದ್ಭುತ ಬೌಲರ್. ನಾನು ವೈಯಕ್ತಿಕವಾಗಿ ಅವರು ಟಿ20 ವಿಶ್ವಕಪ್ನಲ್ಲಿ ಆಡುವುದನ್ನು ನೋಡಲು ಬಯಸಿದ್ದೆ. ಆದರೆ ದುರಾದೃಷ್ಟವಶಾತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಿಲ್ಲ ಎಂದು ಅಬುಧಾಬಿ ಟಿ10 ಲೀಗ್ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಇಮ್ರಾನ್ ತಾಹೀರ್ ಹೇಳಿದರು.
ಎಲ್ಲಾ ಲೆಗ್ ಸ್ಪಿನ್ನರ್ಗಳು ವಿಭಿನ್ನವಾದ ವೇರಿಯೇಶನ್ಗಳನ್ನು ಹೊಂದಿರುತ್ತಾರೆ. ಇದು ಕೇವಲ ಗೂಗ್ಲಿ ಮತ್ತು ಲೆಗ್ಬ್ರೇಕ್ ಮಾತ್ರವಲ್ಲದೆ, ಅಲ್ಲಿ ಟಾಪ್ ಸ್ಪಿನ್ನರ್, ಫ್ಲಿಪ್ಪರ್ ಮತ್ತು ಸ್ಲೈಡರ್ ಇರುತ್ತವೆ. ಹಾಗಾಗಿ ಲೆಗ್ ಸ್ಪಿನ್ನರ್ಗಳು ಪಂದ್ಯದಲ್ಲಿ ಬಹುದೊಡ್ಡ ಪಾತ್ರವಹಿಸುತ್ತಾರೆ. 10 ವರ್ಷಗಳ ಹಿಂದೆ ಬ್ಯಾಟರ್ಗಳು ಸ್ಪಿನ್ಗೆ ಆಡುತ್ತಿದ್ದಷ್ಟು ಸುಲಭವಾಗಿ ಈಗ ಆಡಲು ಸಾಧ್ಯವಿಲ್ಲ. ಇದರ ಕ್ರೆಡಿಟ್ ಸ್ಪಿನ್ನರ್ಸ್ ಮತ್ತು ಫೀಲ್ಡ್ ಸೆಟಿಂಗ್ ಮಾಡುವರಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಕ್ರೀಡೆಯಲ್ಲಿ ಸೋಲಿಲ್ಲದವರ್ಯಾರು ಇಲ್ಲ: ಕೊಹ್ಲಿ ಪಡೆಯ ಬೆನ್ನಿಗೆ ನಿಲ್ಲುವಂತೆ ಭಾರತೀಯರಿಗೆ ಪೀಟರ್ಸನ್ ಮನವಿ