ಗುವಾಹಟಿ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಬೆಳಕಿಗೆ ಬಂದ ಪ್ರತಿಭೆ, ಜಮ್ಮು ಕಾಶ್ಮೀರದ ಉಮ್ರಾನ್ ಮಲಿಕ್ ಸದ್ಯ ಭಾರತದ ಭರವಸೆಯ ಆಟಗಾರ. ತಮ್ಮ ಬೆಂಕಿ ಚೆಂಡಿನ ವೇಗದಿಂದಲೇ ಗುರುತಿಸಿಕೊಂಡಿರುವ ಮಲಿಕ್, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮದೇ ವೇಗದ ಬೌಲಿಂಗ್ ದಾಖಲೆಯನ್ನು ಪುಡಿಗಟ್ಟಿದ್ದಾರೆ. 156 ಕಿಮೀ ವೇಗದಲ್ಲಿ ಚೆಂಡೆಸೆದ ಭಾರತದ ವೇಗಿ ಎಂಬ ದಾಖಲೆಗಳ ಪುಟ ಸೇರಿದರು.
ನಿನ್ನೆ ನಡೆದ ಪಂದ್ಯದಲ್ಲಿ ಉಮ್ರಾನ್ ಪೌರುಷ: ಭಾರತದ 23 ವರ್ಷದ ಯುವವೇಗಿ ಲಂಕಾ ಎದುರು ತಮ್ಮ ತೋಳ್ಬಲ ಪ್ರದರ್ಶನ ಮಾಡಿದರು. 14ನೇ ಓವರ್ನಲ್ಲಿ 156 ಕಿಮೀ ವೇಗದಲ್ಲಿ ಬೌಲ್ ಮಾಡಿದರು. ಈ ಮೂಲಕ ಜಸ್ಪ್ರೀತ್ ಬೂಮ್ರಾ ಹೆಸರಲ್ಲಿದ್ದ ದಾಖಲೆಯನ್ನು ಮೀರಿದರು. ಬೂಮ್ರಾ ಏಕದಿನದಲ್ಲಿ ಭಾರತದ ಪರವಾಗಿ 153.36 ಕಿಮೀ ವೇಗದಲ್ಲಿ ಚೆಂಡೆಸೆದ ಮೊದಲಿಗರಾಗಿದ್ದರು.
ಇದಕ್ಕೂ ಮೊದಲು ಜಮ್ಮು ಕಾಶ್ಮೀರದ ಕುವರ, ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ 155 ಕಿಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಕಳೆದ ವರ್ಷದ ಐಪಿಎಲ್ ಪಂದ್ಯವೊಂದರಲ್ಲಿ 156.9 ಕಿಮೀ ವೇಗದಲ್ಲಿ ಬೌಲ್ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇನ್ನು, ನಿನ್ನೆಯ ಪಂದ್ಯದಲ್ಲಿ ಉಮ್ರಾನ್ ಮಲಿಕ್ 8 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟು 3 ವಿಕೆಟ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ ಚೆಂಡೆಸೆದ ದಾಖಲೆ ಪಾಕಿಸ್ತಾನದ ಮಾಜಿ ದೈತ್ಯ ವೇಗಿ ಶೋಯೆಬ್ ಅಖ್ತರ್ ಹೆಸರಲ್ಲಿದೆ. ಅಖ್ತರ್ 161.3 KMPH ವೇಗದಲ್ಲಿ ಬೌಲ್ ಮಾಡಿದ್ದು, ಈವರೆಗೂ ಯಾರೂ ಮುಟ್ಟಲಾಗದ ದಾಖಲೆಯಾಗಿಯೇ ಉಳಿದಿದೆ.