ಮುಂಬೈ:ಶನಿವಾರ ಸಂಜೆ ಮತ್ತೊಂದು ಹೈವೋಲ್ಟೇಜ್ ಕದನದಲ್ಲಿ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಬ್ಬರು ಶಾಂತಸ್ವಭಾವದ ನಾಯಕರಾದ ಫಾಫ್ ಡು ಪ್ಲೆಸಿಸ್ ಮತ್ತು ಕೇನ್ ವಿಲಿಯಮ್ಸನ್ ತಂಡಗಳನ್ನು ಮುನ್ನಡೆಸುತ್ತಿದ್ದು, ಇತ್ತಂಡಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಪ್ಲೇ ಆಫ್ ರೇಸ್ನಲ್ಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಪಂದ್ಯಗಳಿಂದ 10 ಅಂಕ ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಸನ್ರೈಸರ್ಸ್ ಹೈದರಾಬಾದ್ 6 ಪಂದ್ಯಗಳಿಂದ 8 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಆರ್ಸಿಬಿ ಮೊದಲ ಪಂದ್ಯ ಸೋಲು ಕಂಡು ನಂತರ ಹ್ಯಾಟ್ರಿಕ್ ಗೆಲುವು ಸಾಧಿಸಿತ್ತು. ಸಿಎಸ್ಕೆ ವಿರುದ್ಧ ರೋಚಕ ಸೋಲು ಕಂಡ ಬೆಂಗಳೂರು ನಂತರ ಮತ್ತೆ ಸತತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಇತ್ತ ಸತತ 2 ಸೋಲು ಕಂಡಿದ್ದ ಹೈದರಾಬಾದ್ ತಂಡ ನಂತರ ಸಂಘಟಿತ ಪ್ರದರ್ಶನ ತೋರಿ ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾಯಕ ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮಾ, ತ್ರಿಪಾಠಿ ಮತ್ತು ಮಾರ್ಕ್ರಮ್ ಉತ್ತಮ ಲಯದಲ್ಲಿದ್ದಾರೆ. ಪೂರನ್ ತಮ್ಮ ಫಿನಿಶಿಂಗ್ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಎಸ್ಆರ್ಹೆಚ್ ಎಲ್ಲಾ ಪಂದ್ಯಗಳಲ್ಲಿ ಟಾಸ್ ಗೆದ್ದು ಯಶಸ್ವಿಯಾಗಿ ಚೇಸ್ ಮಾಡಿರುವ 4 ಪಂದ್ಯಗಳಲ್ಲಿ ಗರಿಷ್ಠ ಎಂದರೆ ಕೇವಲ 3 ವಿಕೆಟ್ ಮಾತ್ರ ಕಳೆದುಕೊಂಡಿದೆ. ಹಾಗಾಗಿ ಟೂರ್ನಿಯಲ್ಲಿ ಅತ್ಯಂತ ಸ್ಥಿರತೆ ಹೊಂದಿರುವ ಬ್ಯಾಟಿಂಗ್ ಬಳಗವಾಗಿ ಗುರುತಿಸಿಕೊಂಡಿದೆ.
ನಟರಾಜನ್, ಭುವನೇಶ್ವರ್ ಜೊತೆಗೆ ಯುವ ಬೌಲರ್ಗಳಾದ ಮಾರ್ಕೊ ಜಾನ್ಸನ್ ಮತ್ತು ಉಮ್ರಾನ್ ಮಲಿಕ್ ವೇಗದ ಬೌಲಿಂಗ್ನಲ್ಲಿ ತಂಡದ ಬಲವಾಗಿದ್ದಾರೆ. ಸುಂದರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಕನ್ನಡಿಗ ಜೆ. ಸುಚಿತ್ ಕೇವಲ 28 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಸಂಪೂರ್ಣ ತಂಡವಾಗಿ ಉತ್ತಮ ಪ್ರದರ್ಶನ ತೋರುತ್ತಿರುವ ಹೈದರಾಬಾದ್ ಬೆಂಗಳೂರು ತಂಡಕ್ಕೆ ಎಲ್ಲಾ ರೀತಿಯಲ್ಲೂ ಸವಾಲಾಗಲಿದೆ.
ಆರ್ಸಿಬಿ ಪಂದ್ಯಗಳನ್ನು ಗೆಲ್ಲುತ್ತಿದೆಯಾದರೂ ಯಾವುದೇ ವಿಭಾಗದಲ್ಲಿ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಆಡಿರುವ 7 ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಆರಂಭಿಕರಿಂದ ಉತ್ತಮ ಜೊತೆಯಾಟ ಬಂದಿದೆ. ಯುವ ಬ್ಯಾಟರ್ ಅನುಜ್ ರಾವತ್ ಮತ್ತು ಕೊಹ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತಲೆನೋವಾಗಿದೆ.