ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಸಜ್ಜಾಗಿದೆ. ಜುಲೈ 12ರಿಂದ ಡೊಮಿನಿಕಾದಲ್ಲಿ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮತ್ತು ಕ್ರೆಗ್ ಬ್ರಾಥ್‌ವೈಟ್ ನಾಯಕತ್ವದ ವಿಂಡೀಸ್ ತಂಡಗಳು ಪರಸ್ಪರ ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಮೊದಲ ಟೆಸ್ಟ್‌ಗೆ ತಂಡ ಪ್ರಕಟಿಸಿರುವ ಕೆರಿಬಿಯನ್ ಕ್ರಿಕೆಟ್ ಮಂಡಳಿ ಅನುಭವಿಗಳ ಜೊತೆ ಯುವ ಪ್ರತಿಭೆಗಳಿಗೂ ಮಣೆ ಹಾಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಸರಣಿಯ ಮೊದಲ ಪಂದ್ಯವಿದು. ಎರಡು ಬಾರಿಯ ಚಾಂಪಿಯನ್ಶಿಪ್ನ ರನ್ನರ್ ಅಪ್ ತಂಡ ಭಾರತಕ್ಕೆ ದೊಡ್ಡ ಸವಾಲಾಗದು ಎಂದು ಹೇಳಲು ಸಾಧ್ಯವಿಲ್ಲ. ತವರು ನೆಲದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ವೀಕ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜುಲೈ 12ರಂದು ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡವು ತನ್ನ ಇಬ್ಬರು ಸ್ಟಾರ್ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಹೊರತಾಗಿ ಮೈದಾನಕ್ಕಿಳಿಯುತ್ತಿದೆ.
ಶಮಿ ಮತ್ತು ಬುಮ್ರಾ ಬದಲಿಗೆ ನವದೀಪ್ ಸೈನಿ ಮತ್ತು ಜಯದೇವ್ ಉನಾದ್ಕತ್ ಸ್ಥಾನ ಪಡೆದಿದ್ದು, ಇವರ ಮೇಲೆ ನಿರೀಕ್ಷೆ ಹೆಚ್ಚಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ತಂಡದಲ್ಲಿ ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ ಬೌಲರ್‌ಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಅನುಭವಿ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವುದು ನಿಶ್ಚಿತ ಎನ್ನಲಾಗಿದೆ. ಆಲ್ರೌಂಡರ್ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ಅವರೂ ಸಹ ಸ್ಥಾನ ಪಡೆಯುವ ಸಂಭವವಿದೆ. ಠಾಕೂರ್ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದಾಗಿ ಮೊಹಮ್ಮದ್ ಸಿರಾಜ್ ಅವರೊಂದಿಗೆ ವೇಗದ ಬೌಲಿಂಗ್ ಜವಾಬ್ದಾರಿ ನಿಭಾಯಿಸುವ ಸಾಧ್ಯತೆಗಳನ್ನು ಚರ್ಚಿಸಲಾಗುತ್ತಿದೆ.