ಹೈದರಾಬಾದ್: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಎರಡು ವರ್ಷಗಳ ಬಳಿಕ ಈ ಸಾಧನೆ ಇತಿಹಾಸದ ಪುಟ ಸೇರಿತ್ತು. ಇದರೊಂದಿಗೆ ಎಂ.ಎಸ್ ಧೋನಿ ಎರಡು ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
2013ರಂದು ಇದೇ ದಿನ ಧೋನಿ ನಾಯಕತ್ವದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತ್ತು. ಟೀಂ ಇಂಡಿಯಾದ ಈ ಸಾಧನೆಗೀಗ 8 ವರ್ಷಗಳು ತುಂಬಿವೆ.
ಈ ಸರಣಿಯಲ್ಲಿ ಕುಕ್ ಪಡೆ ಶ್ರೀಲಂಕಾ ವಿರುದ್ಧ ಏಕೈಕ ಪಂದ್ಯದಲ್ಲಿ ಸೋಲು ಅನುಭವಿಸಿದ್ದು ಬಿಟ್ಟರೆ ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಫೈನಲ್ ತಲುಪಿತ್ತು. ಆದರೆ ಧೋನಿ ನಾಯಕತ್ವದ ಭಾರತ ತಂಡ ಒಂದೂ ಪಂದ್ಯದಲ್ಲಿ ಸೋಲು ಕಾಣದೆ ಪ್ರಶಸ್ತಿ ಹಂತಕ್ಕೆ ತಲುಪಿತ್ತು. ಭಾರೀ ಕುತೂಹಲ ಕೆರಳಿಸಿದ್ದ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯದ ಓವರ್‌ಗಳನ್ನು 20ಕ್ಕೆ ಇಳಿಸಲಾಗಿತ್ತು.
ಟಾಸ್ ಗೆದ್ದ ಇಂಗ್ಲೆಂಡ್ ತಂಡ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಇಂಗ್ಲೆಂಡ್‌ನ ವೇಗಿಗಳಾದ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಹಾಗೂ ಟಿಮ್ ಬ್ರೆಸ್ನನ್ ಅವರು 6ರ ಸರಾಸರಿಯಲ್ಲಿ ರನ್ ನೀಡಿದ್ದರು. ಆಫ್ ಸ್ಪಿನ್ನರ್ ಜೇಮ್ಸ್ ಟ್ರೆಡ್‌ವೆಲ್ ಅವರು ಒಂದು ವಿಕೆಟ್ ಹಾಗೂ ರವಿ ಬೊಪಾರಾ 4 ಓವರ್‌ಗಳಲ್ಲಿ 20 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತು ಭಾರತ ತಂಡವನ್ನು ಕಟ್ಟಿ ಹಾಕಿದ್ದರು.
ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ್ದ ಶಿಖರ್ ಧವನ್ 31 ರನ್ ಹಾಗೂ ಯುವ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 43 ರನ್ ಗಳಿಸಿದ್ದು ಬಿಟ್ಟರೆ ಬೇರೆ ಟಾಪ್ ಆರ್ಡರ್ನ ಯಾವುದೆ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತ ದಾಟಿರಲಿಲ್ಲ. ನಂತರ, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರವೀಂದ್ರ ಜಡೇಜಾ 25 ಎಸೆತಗಳಲ್ಲಿ 33 ರನ್ ಗಳಿಸಿ ತಂಡದ ಮೊತ್ತ 120ರ ಗಡಿ ದಾಟಲು ನೆರವಾಗಿದ್ದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 129 ರನ್ ಗಳಿಸಿತ್ತು.
130 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ, ಆರಂಭಿಕ ಆಘಾತ ಅನುಭವಿಸಿತ್ತು. 50 ರನ್ ಗಳಿಸುವುದರೊಳಗೆ ಆಂಗ್ಲ ಪಡೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಟ್ರಾಟ್(20) , ರವಿ ಬೊಪಾರ (33) ಮತ್ತು ಇಯಾನ್ ಮಾರ್ಗನ್ ( 30) ರನ್ಗಳಿಸಿ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದುಕೊಟ್ಟಿದ್ದರು.
ಆದರೆ ಅಲ್ಲಿಯವರೆಗೆ ಇಂಗ್ಲೆಂಡ್ ಪರವಾಗಿದ್ದ ಪಂದ್ಯ 18ನೇ ಓವರ್‌ನಲ್ಲಿ ಸಂಪೂರ್ಣ ಬದಲಾಗಿತ್ತು. 18ನೇ ಓವರ್‌ನ ಮೂರನೇ ಎಸೆತದಲ್ಲಿ ಇಯಾನ್ ಮಾರ್ಗನ್( 30) ಹಾಗೂ ನಾಲ್ಕನೇ ಎಸೆತದಲ್ಲಿ ರವಿ ಬೊಪಾರ(33) ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ ಪಂದ್ಯದ ದಿಕ್ಕು ಬದಲಾಯಿಸಿದ್ದರು.
ಕೊನೆಯದಾಗಿ ಇಂಗ್ಲೆಂಡ್ ತಂಡಕ್ಕೆ 2 ಓವರ್‌ಗಳಿಗೆ 19 ರನ್ ಅಗತ್ಯವಿತ್ತು. ಈ ವೇಳೆ ರವೀಂದ್ರ ಜಡೇಜಾ ಅವರು ಜೋಸ್ ಬಟ್ಲರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ, ಟಿಮ್ ಬ್ರೆಸ್ನನ್ ಅವರನ್ನು ರೋಹಿತ್ ಶರ್ಮಾ, ನಾಯಕ ಎಂ.ಎಸ್ ಧೋನಿ ಸಹಾಯದಿಂದ ರನೌಟ್ ಮಾಡಿದರು. ಅಂತಿಮ ಓವರ್‌ನಲ್ಲಿ 14 ರನ್ ಅಗತ್ಯವಿದ್ದಾಗ ರವಿಚಂದ್ರನ್ ಅಶ್ವಿನ್ ಜವಾಬ್ದಾರಿ ತೆಗೆದುಕೊಂಡರು. ಅಶ್ವಿನ್ ಅಂತಿಮ ಓವರ್‌ನಲ್ಲಿ ಒಂದು ಬೌಂಡರಿ ಸೇರಿದಂತೆ ಒಟ್ಟು 9 ರನ್ ನೀಡಿದರು. ಅಂತಿಮವಾಗಿ ಭಾರತ 5 ರನ್‌ಗಳಿಂದ ಜಯ ಸಾಧಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು.
ಆಲ್‌ರೌಂಡರ್ ಪ್ರದರ್ಶನ ತೋರಿದ್ದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಹಾಗೆಯೇ ಐದು ಪಂದ್ಯಗಳಿಂದ 12 ವಿಕೆಟ್‌ಗಳನ್ನು ಪಡೆದಿದ್ದ ಜಡೇಜಾ, ಟೂರ್ನಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರೆ, ಶಿಖರ್ ಧವನ್ ಟೂರ್ನಿಯ ಟಾಪ್ ಸ್ಕೋರರ್ ಎನಿಸಿಕೊಂಡಿದ್ದರು.