ಇಂಗ್ಲೆಂಡ್: ಶ್ರೀಲಂಕಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದ್ದು, ಈಗಾಗಲೇ ಆಡಿರುವ ಮೂರು ಟಿ - 20 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ವ್ಯಾಪಕ ಟೀಕೆ ಕೇಳಿ ಬರುತ್ತಿದ್ದು, ಇದರ ಮಧ್ಯೆ ಅವರು ಮಾಡಿರುವ ಕೆಲಸವೊಂದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಬೇಕಾಗಿರುವ ಶ್ರೀಲಂಕಾ ತಂಡ ತರಬೇತಿಯಲ್ಲಿ ಭಾಗಿಯಾಗುವ ಬದಲಿಗೆ ಬಯೋಬಬಲ್ ಗಾಳಿಗೆ ತೂರಿ, ವಿವಿಧ ಮಾರ್ಕೆಟ್ ಪ್ರದೇಶಗಳಲ್ಲಿ ಜಾಲಿಯಾಗಿ ಅಡ್ಡಾಡುತ್ತಿದ್ದಾರೆ. ಇದರ ವಿಡಿಯೋ ತುಣುಕವೊಂದು ಇದೀಗ ವೈರಲ್ ಆಗಿದೆ. ಲಂಕಾ ಕ್ರಿಕೆಟ್ ತಂಡ ಉಪನಾಯಕ ಕುಶಾಲ್ ಮೆಂಡಿಸ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಿರೋಷನ್ ಡಿಕ್ವೆಲ್ಲಾ ಹಾಗೂ ಧನುಷ್ಕಾ ಗುಣತಿಲಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಲಂಕಾ ಕ್ರಿಕೆಟ್ ಮ್ಯಾನೇಜರ್, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಅವರು ಯಾವ ಕಾರಣಕ್ಕಾಗಿ ಹೋಗಿದ್ದರು ಎಂಬುದು ಗೊತ್ತಾಗಿಲ್ಲ. ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನ ಮುಂದಿನ ಮೂರು ಟಿ - 20 ಪಂದ್ಯಗಳಿಂದ ಹೊರಗಿಡಲಾಗುವುದು ಎಂದಿದ್ದು, ತಕ್ಷಣದಿಂದಲೇ ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ಅವರನ್ನ ಅಮಾನತು ಮಾಡಲಾಗಿದೆ ಎಂದು ಲಂಕಾ ಕ್ರಿಕೆಟ್ ಹೇಳಿದೆ.
ಇದನ್ನೂ ಓದಿರಿ: T-20 World Cup: ಯುಎಇನಲ್ಲಿ ಟೂರ್ನಿ ನಡೆಸುವುದು ಖಚಿತ ಎಂದ ಶಾ
ಇಂಗ್ಲೆಂಡ್ ವಿರುದ್ಧ ಮುಕ್ತಾಯಗೊಂಡಿರುವ ಮೂರು ಟಿ-20 ಪಂದ್ಯಗಳಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿರುವ ಲಂಕಾ ಮೊದಲ ಪಂದ್ಯದಲ್ಲಿ 7 ವಿಕೆಟ್, ಎರಡನೇ ಪಂದ್ಯದಲ್ಲಿ 5 ವಿಕೆಟ್ ಹಾಗೂ ಕೊನೆ ಪಂದ್ಯದಲ್ಲಿ 89ರನ್ಗಳ ಅಂತರದ ಸೋಲು ಕಂಡಿದೆ.