ಕೇಪ್ಟೌನ್: ಅಂತಿಮ ಕ್ಷಣಗಳಲ್ಲಿ ದೀಪಕ್ ಚಹರ್(54) ಅವರ ಹೋರಾಟದ ನಡುವೆಯೂ ಕೂಡ ಕೊನೆಯ ಪಂದ್ಯದಲ್ಲೂ ಗೆಲುವಿನ ಗೆರೆ ತಲುಪದ ಭಾರತ ತಂಡವು ಕೇವಲ 4 ರನ್ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದೆ.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಕೆ.ಎಲ್. ರಾಹುಲ್ ಹರಿಣಗಳನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಶತಕ(124) ಹಾಗೂ ವಾನ್ಡರ್ ಡಸೆನ್ ಅವರ ಅರ್ಧಶತಕದ ಬಲದಿಂದ ದಕ್ಷಿಣ ಆಫ್ರಿಕಾ 287 ರನ್ ಪೇರಿಸಿತ್ತು.
288 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ನಾಯಕ ರಾಹುಲ್ (9) ಅವರ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (65) ಹಾಗೂ ಮತ್ತೋರ್ವ ಆರಂಭಿಕ ಆಟಗಾರ (61) ಶಿಖರ್ ಧವನ್ ಎರಡನೇ ವಿಕೆಟ್ಗೆ 98 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.
ಆದರೆ ಈ ಹಂತದಲ್ಲಿ 61 ರನ್ ಬಾರಿಸಿದ್ದ ಧವನ್, ಫೆಹ್ಲುಕ್ವಾಯೊ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ವಿರಾಟ್ ಕೊಹ್ಲಿ ಕೂಡ ಮಹಾರಾಜ್ ಎಸೆತದಲ್ಲಿ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ಕೊಹ್ಲಿ 71ನೇ ಶತಕ ಬಾರಿಸುತ್ತಾರೆಂಬ ಅಭಿಮಾನಿಗಳ ಆಸೆ ಇಂದೂ ಕೂಡ ಈಡೇರಲಿಲ್ಲ.
ಇದನ್ನೂ ಒದಿ:ಟೈಟಾನ್ಸ್ ವಿರುದ್ಧ ಪವನ್ ಮಿಂಚು.. ಗೆಲುವಿನ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್
ತದನಂತರ ಶ್ರೇಯಸ್ ಅಯ್ಯರ್ (26) ಹಾಗೂ ಸೂರ್ಯಕುಮಾರ್ ಯಾದವ್ (39) ಉತ್ತಮ ಆಟ ಪ್ರದರ್ಶಿಸಿದರೂ ಕೂಡ ದೊಡ್ಡ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ಇವರಿಬ್ಬರು ಪೆವಿಲಿಯನ್ಗೆ ಮರಳುತ್ತಿದ್ದಂತೆ, ಜಯಂತ್ ಯಾದವ್ ಕೂಡ ಔಟಾದರು. ಅದಾಗಲೇ 223ಕ್ಕೆ 7 ವಿಕೆಟ್ ಉರುಳಿದ್ದರಿಂದ ಭಾರತ ತಂಡದ ಗೆಲುವಿನ ಆಸೆ ಬಹುತೇಕ ಕಮರಿತ್ತು.
ದೀಪಕ್ ಹೋರಾಟ:ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ದೀಪಕ್ ಚಹರ್ ಭರ್ಜರಿ ಅರ್ಧಶತಕ ಬಾರಿಸಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರು. 34 ಎಸೆತಗಳಲ್ಲಿ 54 ರನ್ ಬಾರಿಸಿದ ಚಹರ್ ಲುಂಗಿ ಎನ್ಗಿಡಿ ಬೌಲಿಂಗ್ನಲ್ಲಿ ಪ್ರೆಟೊರಿಯಸ್ಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ಅಲ್ಲದೆ ಭಾರತ ಮತ್ತೆ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಟೀಂ ಇಂಡಿಯಾ ಗೆಲುವಿಗೆ 4 ರನ್ ಅಗತ್ಯವಿತ್ತು, ಆದರೆ ಎರಡನೇ ಎಸೆತದಲ್ಲಿ ಚಹಲ್ ಔಟಾಗುತ್ತಿದ್ದಂತೆ ದಕ್ಷಿಣ ಆಫ್ರಿಕಾ ತಂಡ ಗೆಲುವಿನ ಕೇಕೆ ಹಾಕಿತು.
ಈ ಸೋಲಿನೊಂದಿಗೆ ಟೆಸ್ಟ್ ಸರಣಿಯನ್ನು 2-1ರಿಂದ ಕೈಚೆಲ್ಲಿದ್ದ ಭಾರತ, ಏಕದಿನ ಸರಣಿಯನ್ನೂ ಕೂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ