ಮುಂಬೈ:ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕಾರಯುತ ಗೆಲುವು ಸಾಧಿಸಿತು. ಸೋಫಿ ಡಿವೈನ್ರ ಆರ್ಭಟದ ಬ್ಯಾಟಿಂಗ್ ಮುಂದೆ ಗುಜರಾತ್ ಸೊಲ್ಲೆತ್ತಲಿಲ್ಲ. ಪಂದ್ಯದಲ್ಲಿ ಸೋಫಿ 8 ಸಿಕ್ಸರ್ ಬಾರಿಸಿ ಕ್ರಿಕೆಟ್ ರಸದೌತಣ ನೀಡಿದರು. ಇದೇ ವೇಳೆ ಚೆಂಡನ್ನು 94 ಮೀಟರ್ ದೂರ ಹೊಡೆದು ಅಚ್ಚರಿ ಮೂಡಿಸಿದರು.
ಸೋಫಿ ಹೊಡೆದ ಭರ್ಜರಿ ಸಿಕ್ಸರ್ ಸಾಮಾಜಿಕ ಜಾಲತಾಣದಲ್ಲಿ ಪಟಾಕಿ ಹಚ್ಚಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಸಿಕ್ಸರ್ ಹೊಡೆದ ಬಳಿಕ ಸೋಫಿಯೇ ಒಂದು ಕ್ಷಣ ಅಚ್ಚರಿಪಟ್ಟರು. ಇನ್ನು ಡಗೌಟ್ನಲ್ಲಿದ್ದ ಎಲ್ಲ ಆಟಗಾರ್ತಿಯರು ಸೋಫಿ ಪಂಚ್ಗೆ ಬೆಕ್ಕಸಬೆರಗಾದರು. ಇದಕ್ಕೂ ಮೊದಲು ಪಾಕಿಸ್ತಾನದ ಆಯೇಷಾ ನಸೀಮ್ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ 81 ಮೀಟರ್ ದೂರ ಸಿಕ್ಸರ್ ಬಾರಿಸಿದ್ದರು.
6,4,4,6,4:ಗುಜರಾತ್ ನೀಡಿದ್ದ 189 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಸ್ಫೋಟಕ ಆರಂಭ ಕಂಡಿತು. ಆರಂಭಿಕರಾದ ಸೋಫಿ ಡಿವೈನ್ ಮತ್ತು ಸ್ಮೃತಿ ಮಂಧಾನ ಗುಜರಾತ್ ಜೈಂಟ್ಸ್ ಬೌಲರ್‌ಗಳ ಮೇಲೆರಗಿದರು. ಅದರಲ್ಲೂ ಸೋಫಿ, ಮೊದಲ ಓವರ್ನಿಂದಲೇ ಅಬ್ಬರಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಅವರು ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಆಶ್ಲೀ ಗಾರ್ಡ್ನರ್ ಎಸೆದ 2ನೇ ಓವರ್ನಲ್ಲಿ ಸೋಫಿ ತನ್ನ ಅಸಲಿ ಖದರ್ ತೋರಿಸಿದರು. ಮೊದಲ ಎಸೆತ ಡಾಟ್ ಮಾಡಿದರೆ, ಉಳಿದ ಐದು ಎಸೆತಗಳನ್ನು 6,4,4,6,4 ಬಾರಿಸಿ 24 ರನ್ ಗಳಿಸಿದರು. ಇದು ಮೈದಾನದಲ್ಲಿದ್ದ ಆರ್‌ಸಿಬಿ ಅಭಿಮಾನಿಗಳನ್ನು ರಂಜಿಸಿತು.
ಆರ್‌ಸಿಬಿ ಆಟಗಾರ್ತಿಯರ ಆರ್ಭಟದಿಂದ ಕೇವಲ 3.4 ಓವರ್‌ಗಳಲ್ಲಿ ತಂಡ 50 ರನ್ ಗಡಿ ದಾಟಿತು. ಆರು ಓವರ್‌ಗಳ ಪವರ್‌ಪ್ಲೇ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ, 77 ರನ್ ದಾಖಲಿಸಿತ್ತು. ಇದು ಮಹಿಳಾ ಐಪಿಎಲ್ನಲ್ಲಿ ತಂಡವೊಂದು ಪವರ್ಪ್ಲೇಯಲ್ಲಿ ಬಾರಿಸಿದ ಅತ್ಯಧಿಕ ಮೊತ್ತವಾಯಿತು.