ತರೌಬಾ (ವೆಸ್ಟ್ಇಂಡೀಸ್):ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿಯ ಜೊತೆಗೆ ಏಕದಿನ ಸರಣಿಯನ್ನೂ ವಶಪಡಿಸಿಕೊಂಡಿದೆ. ವಿಂಡೀಸ್ ತವರಿನಲ್ಲಿ 6ನೇ ಸರಣಿಯ ಸೋಲು ಕಂಡರೆ, ಭಾರತ ಕೆರಿಬಿಯನ್ನರ ವಿರುದ್ಧ ಸತತ 13ನೇ ಸಿರೀಸ್ ಅನ್ನು ವಶಕ್ಕೆ ಪಡೆದು ಸಂತಸದ ನಗೆ ಬೀರಿತು. ಅಲ್ಲದೇ ವಿದೇಶದಲ್ಲಿ ಅತ್ಯಂತ ಹೆಚ್ಚು ರನ್ ಅಂತರದ ಗೆಲುವನ್ನು ಮೂರನೇ ಏಕದಿನ ಪಂದ್ಯದಲ್ಲಿ ಸಾಧಿಸಿ ರೆಕಾರ್ಡ್ ಬರೆಯಿತು.
ಏಷ್ಯಾಕಪ್ ಮತ್ತು ವಿಶ್ವಕಪ್ ಹಿನ್ನೆಲೆಯಲ್ಲಿ ಮೂರನೇ ಏಕದಿನ ಪಂದ್ಯದಲ್ಲೂ ಭಾರತ ತಂಡ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಮೈದಾಕ್ಕೆ ಇಳಿದಿತ್ತು. ನಾಯಕನ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಿದರು. ತರೌಬಾದ ಲಾರಾ ಮೈದಾನದಲ್ಲಿ ಆಡಿದ ಮೊದಲ ಏಕದಿನ ಪಂದ್ಯ ಮೊದಲ ಇನ್ನಿಂಗ್ಸ್ನಲ್ಲಿ 351 ರನ್ ಬೃಹತ್ ಮೊತ್ತವನ್ನು ಕಂಡಿತು. ಭಾರತ ನೀಡಿದ್ದ ಈ ಗುರಿಯನ್ನು ಬೆನ್ನು ಹತ್ತಿದ್ದ ವಿಂಡೀಸ್ 151ಕ್ಕೆ ಸರ್ವಪತನ ಕಂಡಿದ್ದರಿಂದ 200 ರನ್ನ ಬೃಹತ್ ಗೆಲುವನ್ನು ಭಾರತ ಕಂಡಿತು. ಇದು ಭಾರತ ವಿದೇಶಿ ನೆಲದಲ್ಲಿ ಸಾಧಿಸಿದ ಬೃಹತ್ ಅಂತರದ ಗೆಲುವಾದರೆ, ವಿಂಡೀಸ್ ವಿರುದ್ಧದ ಎರಡನೇ ಬೃಹತ್ ಮೊತ್ತವಾಗಿದೆ.
ಧೋನಿಯ ದಾಖಲೆ ಪಟ್ಟಿ ಸೇರಿದ ಕಿಶನ್: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಕಿಶನ್ ಸತತ ಒನ್ಡೇ ಸಿರೀಸ್ನಲ್ಲಿ ಮೂರನೇ ಅರ್ಧಶತಕವನ್ನು ಗಳಿಸಿದರು. ಈ ಮೂಲಕ ದ್ವಿಪಕ್ಷೀಯ ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಅರ್ಧಶತಕ ತಲುಪಿದ ಭಾರತೀಯ ಆಟಗಾರರ ಪಟ್ಟಿಯನ್ನು ಸೇರಿದ್ದಾರೆ. ಈ ಪಟ್ಟಿಯ್ಲ ಕ್ರಿಸ್ ಶ್ರೀಕಾಂತ್ (1982), ದಿಲೀಪ್ ವೆಂಗ್‌ಸರ್ಕರ್ (1985), ಮೊಹಮ್ಮದ್ ಅಜರುದ್ದೀನ್ (1993), ಎಂಎಸ್ ಧೋನಿ (2019) ಮತ್ತು ಶ್ರೇಯಸ್ ಅಯ್ಯರ್ (2020) ಇದ್ದಾರೆ. ಇವರ ಜೊತೆ ಆರನೇ ಆಟಗಾರನಾಗಿ ಕಿಶನ್ ಸೇರಿಕೊಂಡಿದ್ದಾರೆ.