ಹರಾರೆ(ಜಿಂಬಾಬ್ವೆ):ಆತಿಥೇಯ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿರುವ ಟೀಂ ಇಂಡಿಯಾ ಯಂಗ್ ಪ್ಲೇಯರ್ ಶುಭಮನ್ ಗಿಲ್ ಅಲ್ಲಿನ ಆಟಗಾರನಿಗೆ ಜರ್ಸಿ ಗಿಫ್ಟ್ ನೀಡುವ ಮೂಲಕ ಹೃದಯ ಗೆದ್ದಿದ್ದಾರೆ. ಹರಾರೆ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿ, ಜಿಂಬಾಬ್ವೆ ನೆಲದಲ್ಲಿ ಹೊಸ ದಾಖಲೆ ಬರೆದಿರುವ ಶುಭಮನ್ ಗಿಲ್ ಕ್ಷೇತ್ರರಕ್ಷಣೆ ವೇಳೆ ಸಿಕಂದರ್ ರಾಜಾ(115) ಅವರು ಹೊಡೆದ ಬಾಲ್ಅನ್ನು ಅದ್ಭುತ ಹಿಡಿಯುವ ಮೂಲಕ ಗಮನ ಸೆಳೆದಿದ್ದರು. ಇದರ ಬೆನ್ನಲ್ಲೇ ಜಿಂಬಾಬ್ವೆ ಆಲ್ರೌಂಡರ್ ಇವಾನ್ಸ್ಗೆ ತಮ್ಮ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಇವಾನ್ಸ್ 10 ಓವರ್ಗಳಲ್ಲಿ 54ರನ್ ನೀಡಿ, ಪ್ರಮುಖ 5 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಕೆಎಲ್ ರಾಹುಲ್, ಶಿಖರ್ ಧವನ್, ದೀಪಕ್ ಹೂಡಾ, ಶುಭಮನ್ ಗಿಲ್ ಸೇರಿದಂತೆ ಐದು ವಿಕೆಟ್ ಪಡೆದರು.
ಟೀಂ ಇಂಡಿಯಾ ಬಲಗೈ ಬ್ಯಾಟರ್ ಶುಭಮನ್ ಗಿಲ್ ಅವರ ದೊಡ್ಡ ಅಭಿಮಾನಿಯಾಗಿರುವ ಇವಾನ್ಸ್, ಮಾಧ್ಯಮಗೋಷ್ಟಿ ವೇಳೆ ಕೈಯಲ್ಲಿ ಗಿಲ್ ಅವರ ಜರ್ಸಿ ಹಿಡಿದು ಮಾತನಾಡಿದರು. ನಾನು ಗಿಲ್ ಅವರ ದೊಡ್ಡ ಅಭಿಮಾನಿ. ಐಪಿಎಲ್ನಲ್ಲಿ, ಆಸ್ಟ್ರೇಲಿಯಾ ನೆಲದಲ್ಲಿ ಗಿಲ್ ಬ್ಯಾಟ್ ಮಾಡ್ತಿದ್ದುದನ್ನು ನಾನು ಟಿವಿಯಲ್ಲಿ ನೋಡಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ನಿಜಕ್ಕೂ ವಿಭಿನ್ನವಾಗಿದೆ. ಹೀಗಾಗಿ, ಅವರ ಅಭಿಮಾನಿಯಾಗಿದ್ದೇನೆ ಎಂದು ಬಣ್ಣಿಸಿದರು.