ಹೈದರಾಬಾದ್(ತೆಲಂಗಾಣ):ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಶುಭಮನ್ ಗಿಲ್ ದ್ವಿಶತಕ ದಾಖಲಿಸಿದ್ದಾರೆ. ಈ ಮೂಲಕ ಭಾರತದ ದಿಗ್ಗಜ ಬ್ಯಾಟರ್ಗಳ ದಾಖಲೆಯನ್ನು ಹಿಮ್ಮೆಟ್ಟಿಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಅತೀ ವೇಗದ 1000 ರನ್ ದಾಖಲೆ ಧೂಳಿ ಪಟವಾಗಿದೆ.
ದ್ವಿಶತಕ ಬಾರಿಸಿದ ಐದನೇ ಬ್ಯಾಟರ್:ಭಾರತದ ಪರವಾಗಿ ದ್ವಿಶತಕ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಐದನೇಯವರಾಗಿ ಗಿಲ್ ಹೊರಹೊಮ್ಮಿದ್ದಾರೆ. ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇತ್ತೀಚೆಗೆ ದ್ವಿಶತಕ ಬಾರಿಸಿದ ಇಶನ್ ಕಿಶನ್ ಪಟ್ಟಿಯಲ್ಲಿದ್ದಾರೆ. ಆದರೆ, ಭಾರತದ ಪರವಾಗಿ ಇದುವರೆಗೂ ಏಳು ಡಬಲ್ ಸೆಂಚುರಿಗಳು ದಾಖಲಾಗಿದೆ. ಇದರಲ್ಲಿ ಮೂರು ದ್ವಿಶತಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಏಕದಿನದ ಭಾರತೀಯ ಅತೀ ಹೆಚ್ಚು ರನ್ ದಾಖಲೆಯೂ ರೋಹಿತ್ ಶರ್ಮಾ (264) ಹೆಸರಿನಲ್ಲಿದೆ.
19 ಇನ್ನಿಂಗ್ಸ್ನಲ್ಲಿ ಸಹಸ್ರ ಸಾಧನೆ:ನಾಲ್ಕು ದಿನದ ಅಂತರದಲ್ಲಿ ಮತ್ತೊಂದು ಶತಕವನ್ನು ಗಿಲ್ ದಾಖಲಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಿದ್ದಾರೆ. ಗಿಲ್ಗೆ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ದಾಖಲಿಸಲು 105 ರನ್ಗಳ ಅವಶ್ಯಕತೆ ಇತ್ತು. ಇಂದು ಶತಕ ಗಳಿಸಿ ಮುನ್ನಡೆಯುತ್ತಿದ್ದಂತೆ ಈ ದಾಖಲೆ ಬರೆದರು.
ಗಿಲ್ ಭಾರತೀಯರಲ್ಲಿ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ ಸಹಸ್ರ ರನ್ ಪೂರೈಸಿದ ಬ್ಯಾಟರ್ ಆಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ 24 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದರು. ಎಲ್ಲ ದೇಶಗಳನ್ನು ಪರಿಗಣಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಗಳಿಸಿದ ಜಂಟಿ ಎರಡನೇ ಸ್ಥಾನವನ್ನು ಪಾಕಿಸ್ತಾನ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅವರೊಂದಿಗೆ ಶುಭಮನ್ ಗಿಲ್ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಬ್ಯಾಟರ್ ಫಖಾರ್ ಝಮಾನ್ 18 ಇನ್ನಿಂಗ್ಸ್ನಲ್ಲಿ ಸಾವಿರ ರನ್ ಪೂರೈಸಿದ್ದು, ಮೊದಲ ಸ್ಥಾನದಲ್ಲಿದ್ದಾರೆ.