ಬೆಂಗಳೂರು : ಮಹಾರಾಜ ಟ್ರೋಫಿಯ ಲೀಗ್‌ನ ಕೊನೆಯ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 11 ರನ್‌ಗಳಿಂದ ಶಿವಮೊಗ್ಗ ಲಯನ್ಸ್ ಮಣಿಸಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಅರ್ಹತೆ ಗಳಿಸಿದೆ. ಅಭಿನವ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಅವರ 102 ರನ್‌ಗಳ ಜೊತೆಯಾಟದ ಬಲದಿಂದ ಶಿವಮೊಗ್ಗ ಲಯನ್ಸ್ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ತನ್ನ ನಾಲ್ಕನೇ ಓವರ್‌ನಲ್ಲಿ ನಿಹಾಲ್ ಉಳ್ಳಾಲ್ (10) ವಿಕೆಟ್ ಕಳೆದುಕೊಂಡಿತು. ಆದರೆ ಆರಂಭಿಕ ರೋಹನ್ ಕದಂ ಜೊತೆಗೂಡಿದ ವಿನಯ್ ಸಾಗರ್ ಎರಡನೇ ವಿಕೆಟ್‌ಗೆ 42 ರನ್‌ಗಳನ್ನು ಸೇರಿಸುವಲ್ಲಿ ನೆರವಾದರು. ಈ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರೋಹನ್ ಕದಂ (35) ಸರ್ಫರಾಜ್ ಅಶ್ರಫ್ ಗೆ ವಿಕೆಟ್ ಒಪ್ಪಿಸಿದರು. ನಂತರ ದಾಳಿಗಿಳಿದ ವೇಗಿ ತನಿಶ್ ಮಹೇಶ್ ರೋಹಿತ್ ಕುಮಾರ್ (8) ಮತ್ತು ವಿನಯ್ ಸಾಗರ್ (32) ಗೆ ಪೆವಿಲಿಯನ್ ದಾರಿ ತೋರಿದರು.
ಬಳಿಕ ಜೊತೆಯಾದ ಅಭಿನವ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಶತಕದ ಜೊತೆಯಾಟದ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಮುನ್ನೆಡೆಸಿದರು. ನಾಯಕ ಶ್ರೇಯಸ್ ಗೋಪಾಲ್ (43) ರನ್ ಗಳಿಸಿ ಔಟ್ ಆದರೆ, ಅಭಿನವ್ ಮನೋಹರ್ (25 ಎಸೆತಗಳಲ್ಲಿ 58*) ರನ್ ಗಳಿಸಿ ಬೆಂಗಳೂರು ಬೌಲರ್‌ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ಅಂತಿಮವಾಗಿ ಶಿವಮೊಗ್ಗ ತನ್ನ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನ ಕಳೆದುಕೊಂಡು 192 ರನ್ ಪೇರಿಸಿತು.
ಬೃಹತ್ ಮೊತ್ತ ಬೆನ್ನತ್ತಿದ ಬೆಂಗಳೂರು ತನ್ನ ನಾಲ್ಕನೇ ಓವರ್‌ನಲ್ಲಿ ನಾಯಕ ಮಯಾಂಕ್ ಅಗರ್ವಾಲ್ (14) ವಿಕೆಟ್ ಕಳೆದುಕೊಂಡಿತು. ಆರಂಭಿಕ ಇಜೆ ಜಾಸ್ಪರ್ (22) ಪವನ್ ದೇಶಪಾಂಡೆ (8) ಶುಭಾಂಗ್ ಹೆಗಡೆ (15) ರನ್‌ಗಳಿಗಷ್ಟೇ ಸೀಮಿತವಾದರು.ಆದರೆ ನೆಲಕಚ್ಚಿ 30 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ಮುನ್ನುಗ್ಗುತ್ತಿದ್ದ ಡಿ.ನಿಶ್ಚಲ್ (68) ರನ್ ಗಳಿಸಿದ್ದಾಗ ವಿಕೆಟ್ ಕೈಚೆಲ್ಲಿದರು. ಕೆಳ ಕ್ರಮಾಂಕದಲ್ಲಿ ಸೂರಜ್ ಅಹುಜಾ (27) ಅಮನ್ ಖಾನ್ (10) ರನ್ ಗಳಿಸಿ ಔಟ್ ಆದರು. ಅಂತಿಮವಾಗಿ 8 ವಿಕೆಟ್ ಪಡೆದು ಬೆಂಗಳೂರು ತಂಡವನ್ನು 181 ರನ್‌ಗಳಿಗೆ ನಿಯಂತ್ರಿಸಿದ ಶಿವಮೊಗ್ಗ 11 ರನ್ ಗಳಿಂದ ಗೆದ್ದು ಸೆಮಿಫೈನಲ್ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೆಣಸಾಡಲು ಸ್ಥಾನ ಭದ್ರಪಡಿಸಿಕೊಂಡಿತು.