ಢಾಕಾ (ಬಾಂಗ್ಲಾದೇಶ): ಆಲ್‌ರೌಂಡರ್, ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಮತ್ತೊಮ್ಮೆ ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಮುಂದೆ ನಡೆಯಲಿರುವ ಏಷ್ಯಾಕಪ್ ಮತ್ತು 2023ರ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡ ಮುನ್ನಡೆಸಲಿದ್ದಾರೆ.
ಬಾಂಗ್ಲಾ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಇತ್ತೀಚೆಗೆ ರಾಷ್ಟ್ರೀಯ ತಂಡಕ್ಕೆ ವಿಶ್ವಕಪ್ಗೂ ಮುನ್ನ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಹೀಗಾಗಿ ಅವರ ಬದಲಿ ನಾಯಕನಾಗಿ ಶಕೀಬ್ ಅವರನ್ನು ಕ್ರಿಕೆಟ್ ಮಂಡಳಿ ನೇಮಿಸಿದೆ. ಇಕ್ಬಾಲ್ ಬೆನ್ನು ನೋವಿನ ಕಾರಣ ಏಷ್ಯಕಪ್ನಿಂದ ಹೊರಗುಳಿಯುವುದಾಗಿ ಹೇಳಿದ್ದರು. ಹೀಗಾಗಿ ವಿಶ್ವಕಪ್ ಮತ್ತು ಏಷ್ಯಾಕಪ್ಗೆ ಶಕೀಬ್ ನಾಯಕರಾಗಿರಲಿದ್ದಾರೆ. ಅಲ್ಲದೇ ವಿಶ್ವಕಪ್ಗೂ ಮುನ್ನ ಬಾಂಗ್ಲಾದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಸರಣಿಗೂ ಹಸನ್ ನಾಯಕತ್ವ ಇರಲಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ. "ಶಕೀಬ್ ಅಲ್ ಹಸನ್ ಏಷ್ಯಾ ಕಪ್, ನ್ಯೂಜಿಲೆಂಡ್ ಸರಣಿ ಮತ್ತು ವಿಶ್ವಕಪ್‌ಗೆ ನಾಯಕರಾಗಿದ್ದಾರೆ. ಅವರು ಬಾಂಗ್ಲಾದೇಶಕ್ಕೆ (ಸದ್ಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ ಶಕೀಬ್) ಹಿಂದಿರುಗಿದಾಗ ಮಾತನಾಡುತ್ತೇವೆ. ಅವರ ದೀರ್ಘಾವಧಿ ನಾಯಕತ್ವವನ್ನು ನಂತರ ಪ್ರಕಟಿಸುತ್ತೇವೆ. ಈಗ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದೇವೆ. ದೀರ್ಫಾವದಿಗೆ ಅವರು ಯಾವ ಮಾದರಿಯ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ" ಎಂದು ಹೇಳಿದ್ದಾರೆ.