ಆಂಟಿಗುವಾ (ವೆಸ್ಟ್ ಇಂಡೀಸ್): ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಮ್ಯಾಚ್ ವಿನ್ನಿಂಗ್ ಶತಕ ದಾಖಲಿಸಿ ಶಾಯ್ ಹೋಪ್ ವೆಸ್ಟ್ ಇಂಡೀಸ್ಗೆ 4 ವಿಕೆಟ್ಗಳ ಜಯ ತಂದಿತ್ತರು. ಇದರಿಂದ ಆಂಗ್ಲರ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಕೆರಿಬಿಯನ್ ಪಡೆ ಶುಭಾರಂಭ ಮಾಡಿದೆ.
ಇತ್ತೀಚಿಗಿನ ವರ್ಷಗಳಲ್ಲಿ ವಿಂಡೀಸ್ ತಂಡಟದ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಸ್ಟಾರ್ ಆಟಗಾರ ಶಾಯ್ ಹೋಪ್ 83 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದರು. ಇದು ಅವರ ವೃತ್ತಿಜೀವನದ 16ನೇ ಏಕದಿನ ಶತಕ ಹಾಗೇ ವೇಗದ ಶತಕವೂ ಆಗಿದೆ. ಇದಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ 114 ಇನಿಂಗ್ಸ್‌ಗಳಲ್ಲಿ 5000 ರನ್‌ಗಳ ಗಡಿ ದಾಟುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆ ಸರಿಗಟ್ಟಿ ದಾಖಲೆ ಬರೆದಿದ್ದಾರೆ. ಇವರ ಈ ಆಟದಿಂದ ವೆಸ್ಟ್ ಇಂಡೀಸ್ 4 ವಿಕೆಟ್ಗಳ ಜಯ ದಾಖಲಿಸಿದೆ.
ಪಂದ್ಯದ ನಂತರ ಅವರ ಈ ಸ್ಥಿರ ಪ್ರದರ್ಶನ ಬಗ್ಗೆ ಕೇಳಿದಾಗ ಧೋನಿ ಕಲಿಸಿದ ಪಾಠದ ಬಗ್ಗೆ ಹೇಳಿಕೊಂಡಿದ್ದಾರೆ. "ಬಹಳ ಪ್ರಸಿದ್ಧ ವ್ಯಕ್ತಿ, ಎಂಎಸ್ ಧೋನಿ - ನಾನು ಸ್ವಲ್ಪ ಸಮಯದ ಹಿಂದೆ ಅವರೊಂದಿಗೆ ಮಾತನಾಡಿದ್ದೆ ಆಗ ಅವರು ಹೇಳುತ್ತಿದ್ದರು, 'ಬ್ಯಾಟರ್ಗಳು ಯಾವಾಗಲೂ ಯೋಚಿಸುವುದಕ್ಕಿಂತ ಹೆಚ್ಚಿನ ಸಮಯವನ್ನು ಹೊಂದಿರುತ್ತೀರಿ'. ನನ್ನ ಏಕದಿನ ವೃತ್ತಿ ಬದುಕಿನುದ್ದಕ್ಕೂ ಅದನ್ನು ಪಾಲಿಸುತ್ತಾ ಬಂದಿದ್ದೇನೆ" ಎಂದು ಹೇಳಿದ್ದಾರೆ.
ಪಂದ್ಯದಲ್ಲಿ: ಭಾನುವಾರ ಆಂಟಿಗುವಾದಲ್ಲಿ ಸ್ಯಾಮ್ ಕರನ್ ಎಸೆತದಲ್ಲಿ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್‌ಗಳೊಂದಿಗೆ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ ರೋಚಕ ಜಯವನ್ನು ತಂದಿತ್ತರು. ಕೊನೆಯ ಎರಡು ಓವರ್ ಬಾಕಿ ಇದ್ದಾಗ ವಿಂಡೀಸ್ ಗೆಲುವಿಗೆ 19 ರನ್ ಬೇಕಾಗಿತ್ತು. 49ನೇ ಓವರ್ ಮಾಡಲು ಸ್ಯಾಮ್ ಕರನ್ ಬಂದಿದ್ದರು. ಅವರ ಓವರ್ನ 1ನೇ ಬಾಲ್ನಲ್ಲಿ ಜೋಸೆಫ್ ಒಂದು ರನ್ ತೆಗೆದಿ ಹೋಪ್ಗೆ ಕ್ರೀಸ್ ಕೊಟ್ಟರೆ 2,4,5ನೇ ಬಾಲ್ನ್ನು ಸಿಕ್ಸ್ಗೆ ಅಟ್ಟಿ 4 ವಿಕೆಟ್ ಮತ್ತು 1.1 ಓವರ್ ಉಳಿಸಿಕೊಂಡು ಜಯದಾಖಲಿಸಲು ಕಾರಣರಾದರು. ಇದರೊಂದಿಗೆ ಅವರ ಶತಕವೂ ಪೂರ್ಣವಾಗಿತ್ತು.
ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ (70) ಅವರ ಇನ್ನಿಂಗ್ಸ್ ಬಲದಿಂದ ನಿಗದಿತ ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 325 ರನ್‌ಗಳ ದೊಡ್ಡ ಮೊತ್ತದ ಗುರಿಯನ್ನು ನೀಡಿತ್ತು. ಇದನ್ನು ಬೆನ್ನತ್ತಿದ ಕೆರಿಬಿಯನ್ ಪಡೆಗೆ ಅಲಿಕ್ ಅಥನಾಝೆ (66) ಅರ್ಧಶತಕ, ನಾಯಕ ಶಾಯ್ ಹೋಪ್ (109*) ಶತಕ ಮತ್ತು ರೊಮಾರಿಯೊ ಶೆಫರ್ಡ್ (49) ಸ್ಫೋಟಕ ಬ್ಯಾಟಿಂಗ್ ನೆರವಾಗಿದ್ದರಿಂದ ಗೆಲುವು ದಾಖಲಿಸಿದೆ.
ಇದನ್ನೂ ಓದಿ:ಗೆಲುವಿನಲ್ಲೂ ಲೋಪಗಳಿರುತ್ತವೆ, ಅವುಗಳನ್ನು ಅರಿತರೆ ಯಶಸ್ಸಿಗೆ ದಾರಿ ಆಗುತ್ತದೆ: ಸೂರ್ಯಕುಮಾರ್