ನವದೆಹಲಿ:ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅದೃಷ್ಟವೇ ಸರಿಯಿಲ್ಲವೋ ಏನೋ. ಕಳೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಏಕಮಾತ್ರ ಪಂದ್ಯವಾಡಿ ಬೆಂಚ್ ಕಾದಿದ್ದ ಯುವ ಕ್ರಿಕೆಟಿಗ, ಶ್ರೀಲಂಕಾ ಎದುರಿನ ಸರಣಿಯಲ್ಲಿ ಗಾಯಗೊಂಡು ಹೊರಬಿದ್ದಿದ್ದಾರೆ. ಉಳಿದೆರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿರುವ ಸಂಜು ಬದಲಾಗಿ ಜಿತೇಶ್ ಶರ್ಮಾರನ್ನು ಸರಣಿಗೆ ಆಯ್ಕೆ ಮಾಡಲಾಗಿದೆ.
ಲಂಕಾ ವಿರುದ್ಧ ಮಂಗಳವಾರ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಲೆ ಚೆಂಡು ಹಿಡಿಯುವ ರಭಸದಲ್ಲಿ ಮೈದಾನದಲ್ಲಿ ಬಿದ್ದಿದ್ದರು. ಈ ವೇಳೆ ಮೊಣಕಾಲಿಗೆ ಗಾಯವಾಗಿದೆ. ಬಳಿಕ ನಡೆದ ಸ್ಕ್ಯಾನಿಂಗ್ನಲ್ಲಿ ಗಾಯವಾಗಿದ್ದು ಕಂಡು ಬಂದಿದೆ. ಇದರಿಂದ ವೈದ್ಯರ ಸಲಹೆಯ ಮೇರೆಗೆ ಉಳಿದ ಪಂದ್ಯಗಳಿಂದ ವಿಶ್ರಾಂತಿ ಪಡೆಯಲಿದ್ದಾರೆ. ರಾಷ್ಟ್ರೀಯ ಹಿರಿಯರ ಆಯ್ಕೆ ಸಮಿತಿ ಸರಣಿಯ ಉಳಿದೆರಡು ಪಂದ್ಯಗಳಿಗೆ ಬ್ಯಾಟರ್ ಜಿತೇಶ್ ಶರ್ಮಾರನ್ನು ಸೇರಿಸಿಕೊಂಡಿದೆ.
ಈ ಹಿಂದೆಯೂ ಅನೇಕ ಟೂರ್ನಿಗಳಲ್ಲಿ ತಂಡಕ್ಕೆ ಆಯ್ಕೆಯಾದರೂ ಬೆಂಚ್ ಕಾಯುತ್ತಿದ್ದ ಸಂಜು ಸ್ಯಾಮ್ಸನ್ ಈ ಸಲ ಅದೃಷ್ಟವೇ ಕೈಕೊಟ್ಟಂತಿದೆ. ಮೊದಲ ಟಿ20 ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರೂ ಕೂಡ ಮೈದಾನದಲ್ಲಿ ಹೆಚ್ಚಿನ ಗಮನ ಸೆಳೆಯುವಲ್ಲಿ ವಿಫಲರಾದರು. ಬ್ಯಾಟರ್ ಆಗಿ ಅವಕಾಶ ಗಿಟ್ಟಿಸಿಕೊಂಡಿದ್ದ ಸಂಜು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಆದರೆ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 6 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದ ಅವರು ದೊಡ್ಡ ಹೊಡೆತಕ್ಕೆ ಯತ್ನಿಸಿ ನಿರಾಸೆ ಅನುಭವಿಸಿದ್ದರು. ಔಟಾಗುವ ಹಿಂದಿನ ಎಸೆತದಲ್ಲೂ ಸಿಕ್ಸರ್ ಸಿಡಿಸಲು ಪ್ರಯತ್ನಿಸಿದ್ದ ಅವರು ಕ್ಯಾಚ್ ಕೈಚೆಲ್ಲಿದ್ದರಿಂದ ಬಚಾವ್ ಆಗಿದ್ದರು. ಆದರೆ, ಮರು ಎಸೆತದಲ್ಲೇ ಮತ್ತೆ ಪ್ರಮಾದವೆಸಗಿ ಔಟಾಗಿದ್ದರು.
2022ರಲ್ಲಿ ವಿಶ್ವಕಪ್ ಸೇರಿದಂತೆ ಅನೇಕ ಸರಣಿಗಳಲ್ಲಿ ತಂಡದಿಂದ ಕಡೆಗಣಿಸಲ್ಪಟ್ಟ ಸ್ಯಾಮ್ಸನ್ಗೆ 2023ರ ಆರಂಭವೂ ಸಹ ಆಘಾತಕಾರಿಯಾಗಿದೆ. ಪಂದ್ಯದ ಆರಂಭದಲ್ಲೇ ಕ್ಯಾಚ್ ಕೈಚೆಲ್ಲಿದ್ದ ಸಂಜು, ಬಳಿಕ ಕ್ಷೇತ್ರ ರಕ್ಷಣೆ ವೇಳೆ ಮೊಣಕಾಲು ಗಾಯಕ್ಕೆ ತುತ್ತಾದರು. ಇದರಿಂದ ತಂಡದಿಂದ ಹೊರಗುಳಿಯುವ ಅನಿವಾರ್ಯತೆ ಎದುರಾಗಿದೆ. ಸಂಜು ಸ್ಯಾಮ್ಸನ್ ಮೊಣಕಾಲಿನ ಗಾಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಭಾರತದ ಟಿ20 ತಂಡದಲ್ಲಿ ಜಿತೇಶ್ ಶರ್ಮಾಗೆ ಅದೃಷ್ಟದ ಬಾಗಿಲು ತೆರೆದಿದೆ.
ಅಚ್ಚರಿಯ ಆಯ್ಕೆ:ಜಿತೇಶ್ ಶರ್ಮಾ ಆಯ್ಕೆಯು ಬಿಸಿಸಿಐನ ಆಚ್ಚರಿಯ ನಡೆ, ತಮ್ಮ ಆಯ್ಕೆಯನ್ನು ಜಿತೇಶ್ ಕೂಡ ಊಹಿಸಿರಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅಲಭ್ಯತೆ ಹಿನ್ನೆಲೆಯಲ್ಲಿ ಜಿತೇಶ್ಗೆ ಅದೃಷ್ಟ ಒಲಿದಿದೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿಕೆಟ್ ಕೀಪರ್ ಬ್ಯಾಟರ್ ಆಗಿರುವವ ಜಿತೇಶ್ ಭಾರತ ತಂಡ ಡ್ರೆಸ್ಸಿಂಗ್ ರೂಮ್ ಸೇರಿಕೊಳ್ಳಲಿದ್ದಾರೆ.