ಕೊಲಂಬೊ (ಶ್ರೀಲಂಕಾ):ಸಚಿನ್ ತೆಂಡೂಲ್ಕರ್ ನಿವೃತ್ತಿಯ ನಂತರ ಮಾಧ್ಯಮ ಒಂದಕ್ಕೆ ಕೊಟ್ಟ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಭಾರತದ ಮುಂದಿನ ಭವಿಷ್ಯದ ಸ್ಟಾರ್ ಆಟಗಾರರು ಎಂದು ಉಲ್ಲೇಖಿಸಿದ್ದರು. ಈ ಇಬ್ಬರು ಆಟಗಾರರು ಆ ಹೇಳಿಕೆಯನ್ನು ನಿಜ ಮಾಡುತ್ತಾ ಬಂದಿದ್ದಾರೆ. ಏಷ್ಯಾಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಅನುಭವಿ ಬ್ಯಾಟರ್ಗಳಿಗೆ ಈಗ ಜಂಟಿಯಾಗಿ ವಿಶೇಷ ದಾಖಲೆ ಒಂದನ್ನು ನಿರ್ಮಿಸಿದ್ದಾರೆ.
ನಿನ್ನೆ ಪಾಕಿಸ್ತಾನದ ವಿರುದ್ಧ 98 ರನ್ ಗಳಿಸಿ ವಿರಾಟ್ 13,000 ರನ್, ಮತ್ತು ಇಂದು ಲಂಕಾ ವಿರುದ್ಧ 22 ರನ್ ಗಳಿಸಿ ರೋಹಿತ್ ಶರ್ಮಾ 10,000 ರನ್ ಮೈಲಿಗಲ್ಲು ತಲುಪಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರೀಯವಾಗಿರುವ ಬ್ಯಾಟರ್ಗಳಲ್ಲಿ ಈ ಸಾಧನೆಯನ್ನು ಯಾರು ಮಾಡಿಲ್ಲ. ಸಚಿನ್ ನಂತರ 13,000 ರನ್ ದಾಟಿದ ಎರಡನೇ ಭಾರತದ ಆಟಗಾರ ವಿರಾಟ್. 10,000 ರನ್ ಗಡಿ ದಾಟಿದ ಭಾರತದ ಆರನೇ ಆಟಗಾರ ರೋಹಿತ್ ಶರ್ಮಾ ಆಗಿದ್ದಾರೆ.
ರೋಹಿತ್ - ವಿರಾಟ್ ವಿಶೇಷ ದಾಖಲೆ: ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಪಾಲುದಾರಿಕೆಯ ಮೂಲಕ ಮತ್ತೊಂದು ಗರಿಯನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಈ ಜೋಡಿ 5,000 ರನ್‌ಗಳ ಜೊತೆಯಾಟ ಪೂರೈಸಿ ದಾಖಲೆ ಮಾಡಿದ್ದಾರೆ.