ಮುಂಬೈ (ಮಹಾರಾಷ್ಟ್ರ):ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಇದೇ 16 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್‌ಗಾಗಿ ಗುರುವಾರ ಬೆಳಗ್ಗೆ ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಿತು.
ಏಷ್ಯಾ ಕಪ್ ಕಹಿ ನೆನಪಿನ ಬಳಿಕ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಜಯಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಟೀಂ ಇಂಡಿಯಾ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ತಂಡದ ಗ್ರೂಪ್ ಫೋಟೋವನ್ನು ಬಿಸಿಸಿಐ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಪರ್ಫೆಕ್ಟ್ ಚಿತ್ರ, ಸಾಧಿಸಿ ಬನ್ನಿ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ ಬರುತ್ತಿದ್ದೇವೆ ಎಂದು ಬರೆದುಕೊಂಡಿದೆ.
ತೀರದ ಗಾಯದ ಸಮಸ್ಯೆ:2007 ರ ಚಾಂಪಿಯನ್ ತಂಡ ಗಾಯದ ಸಮಸ್ಯೆಯಿಂದ ಹೊರಬಂದಿಲ್ಲ. ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ತಂಡಕ್ಕೆ ಆಯ್ಕೆಯಾಗಿಲ್ಲ. ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ್ದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುಮೂಳೆ ಮುರಿತಕ್ಕೀಡಾಗಿ ವಿಶ್ವಕಪ್ನಿಂದಲೇ ಹೊರಬಿದ್ದಿದ್ದಾರೆ.