ವಿಶಾಖಪಟ್ಟಣಂ(ಆಂಧ್ರಪ್ರದೇಶ):ವಿಶ್ವಕಪ್ ಕ್ರಿಕೆಟ್ ಫೈನಲ್ ಸೋಲಿನ ನೋವಿನಲ್ಲಿರುವ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ವಿಶಾಖಪಟ್ಟಣಂ ಮೈದಾನದಲ್ಲಿ ಗುರುವಾರ ನಡೆದ ಪಂದ್ಯವನ್ನು ಟೀಂ ಇಂಡಿಯಾ 2 ವಿಕೆಟ್‌ಗಳಿಂದ ಜಯ ಸಾಧಿಸಿತು. ಭಾರತ 209 ರನ್‌ಗಳ ದೊಡ್ಡ ಗುರಿಯನ್ನು 19.5 ಓವರ್‌ಗಳಲ್ಲಿ ತಲುಪಿತು.
ನಾಯಕ ಸೂರ್ಯ ಕುಮಾರ್ ಯಾದವ್ 80 ರನ್ ಪೇರಿಸಿದರೆ, ಇಶಾನ್ ಕಿಶನ್ 58 ರನ್‌ಗಳ ಭರ್ಜರಿ ಆಟವಾಡಿದರು. ಇದಲ್ಲದೇ ರಿಂಕು ಸಿಂಗ್ 14 ಎಸೆತಗಳಲ್ಲಿ 22 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದ ಕೊನೆಯ ಎಸೆತವನ್ನು ಸಿಕ್ಸರ್‌ಗಟ್ಟುವ ಮೂಲಕ ರಿಂಕು ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಆದರೆ ಈ ಸಿಕ್ಸರ್ ಸ್ಕೋರ್ ಬೋರ್ಡ್ ಸೇರಲಿಲ್ಲ.
ಹೀಗಿತ್ತು ಪಂದ್ಯ: ಭಾರತ ಗೆಲ್ಲಲು ಕೊನೆಯ ಓವರ್‌ನಲ್ಲಿ ಏಳು ರನ್ ಗಳಿಸಬೇಕಿತ್ತು. ರಿಂಕು ಮೊದಲ ಎಸೆತವನ್ನು ಬೌಂಡರಿಗಟ್ಟಿದರು. ಇದಾದ ಬಳಿಕ ಮುಂದಿನ ನಾಲ್ಕು ಎಸೆತಗಳಲ್ಲಿ ಕೇವಲ 2 ರನ್ ಗಳಿಸಲು ಭಾರತ ಮೂರು ವಿಕೆಟ್ ಕಳೆದುಕೊಂಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್ ಅಗತ್ಯವಿತ್ತು. ರಿಂಕು ಸಿಕ್ಸರ್ ಸಿಡಿಸಿದರು. ಈ ಎಸೆತ ನೋ ಬಾಲ್ ಆಗಿದ್ದರಿಂದ ಭಾರತ ಪಂದ್ಯ ಗೆದ್ದುಕೊಂಡಿತು. ಇದರಿಂದಾಗಿ ಭಾರತದ ಸ್ಕೋರ್ ಬೋರ್ಡ್‌ಗೆ ಆರು ರನ್ ಸೇರ್ಪಡೆಯಾಗಲಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ಪಂದ್ಯದ ನಂತರ ರಿಂಕು ಇನ್ನಿಂಗ್ಸ್ ಅನ್ನು ಶ್ಲಾಘಿಸಿದರು.
ಭಾರತ ತಂಡ ಗುರಿ ಬೆನ್ನತ್ತಲು ಮುಂದಾದಾಗ 22 ರನ್ ಆಗುವಷ್ಟರಲ್ಲಿ ಇಬ್ಬರೂ ಆರಂಭಿಕ ಬ್ಯಾಟರ್‌ಗಳು ಪೆವಿಲಿಯನ್‌ಗೆ ಮರಳಿದ್ದರು. ಬಳಿಕ ಇಶಾನ್ ಕಿಶನ್ ಮತ್ತು ಸೂರ್ಯ ಕುಮಾರ್ ಯಾದವ್ ಮೂರನೇ ವಿಕೆಟ್‌ಗೆ 60 ಎಸೆತಗಳಲ್ಲಿ 112 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಶಾನ್ ಔಟಾದ ಬಳಿಕ ಸೂರ್ಯ ಅವರು ರಿಂಕು ಸಿಂಗ್ ಬೆಂಬಲ ಪಡೆದರು. ಐದನೇ ವಿಕೆಟ್‌ಗೆ ಇಬ್ಬರ ನಡುವೆ 17 ಎಸೆತಗಳಲ್ಲಿ 40 ರನ್‌ಗಳ ಜೊತೆಯಾಟ ಈ ಪಂದ್ಯದಲ್ಲಿ ಭಾರತದ ಗೆಲುವನ್ನು ಸಂಪೂರ್ಣವಾಗಿ ಖಚಿತಪಡಿಸಿತು. ಸರಣಿಯ ಎರಡನೇ ಪಂದ್ಯ ನವೆಂಬರ್ 26ರಂದು ತಿರುವನಂತಪುರಂನಲ್ಲಿ ನಡೆಯಲಿದೆ.
ಇದನ್ನೂ ಓದಿ:ಕಿಶನ್, ಸೂರ್ಯ ಭರ್ಜರಿ ಬ್ಯಾಟಿಂಗ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್ಗಳ ರೋಚಕ ಜಯ