ಬೆಂಗಳೂರು:ಉತ್ತರಾಖಂಡ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ರಣಜಿ ಪಂದ್ಯದಲ್ಲಿ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸುವೇದ್ ಪಾರ್ಕರ್ ದ್ವಿಶತಕ ಸಾಧನೆ ಮಾಡಿದ್ದು, ಪದಾರ್ಪಣೆ ಪಂದ್ಯದಲ್ಲೇ ಈ ಸಾಧನೆ ಮಾಡಿರುವ ಭಾರತದ 14ನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ಉತ್ತರಾಖಂಡ - ಮುಂಬೈ ತಂಡದ ನಡುವೆ ಪಂದ್ಯ ನಡೆಯುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದ ಸುವೇದ್ ಪಾರ್ಕರ್ ತಾವು ಎದುರಿಸಿದ 447 ಎಸೆತಗಳಲ್ಲಿ 21 ಬೌಂಡರಿ, 4 ಸಿಕ್ಸರ್ ಸೇರಿದಂತೆ 252ರನ್ಗಳಿಕೆ ಮಾಡಿದರು. ಈ ಮೂಲಕ ತಂಡ 8 ವಿಕೆಟ್ನಷ್ಟಕ್ಕೆ 647ರನ್ಗಳಿಕೆ ಮಾಡಿ, ಡಿಕ್ಲೇರ್ ಮಾಡಿಕೊಂಡಿದೆ.
ಇದನ್ನೂ ಓದಿ:IND vs SA T20: ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಚಹಲ್ ಹೊಸ ದಾಖಲೆಗೆ ಸಜ್ಜು
ಸುವೇದ್ ಪಾರ್ಕರ್ಗೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಅವರೇ ತರಬೇತಿ ನೀಡಿದ್ದು, ತಾವು ಬ್ಯಾಟ್ ಬೀಸಲು ಮೈದಾನಕ್ಕಿಳಿದ ಮೊದಲ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದಾರೆ. 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಸುವೇದ್ ಪಾರ್ಕರ್, ಸರ್ಫರಾಜ್ ಖಾನ್ ಅವರೊಂದಿಗೆ ಸೇರಿ 277ರನ್ಗಳ ಜೊತೆಯಾಟವಾಡಿದರು. ಪ್ರಥಮ ದರ್ಜೆ ಕ್ರಿಕೆಟ್ನ ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಎರಡನೇ ಮುಂಬೈ ಬ್ಯಾಟರ್ ಆಗಿದ್ದಾರೆ. ಈ ಹಿಂದೆ 1993 - 94ರ ಋತುವಿನಲ್ಲಿ ಹರಿಯಾಣ ವಿರುದ್ಧ ಮುಂಬೈ ತಂಡದ ಅಮೋಲ್ ಮಜುಂದಾರ್ 260 ರನ್ ಗಳಿಸಿದ್ದರು.
ಸುವೇದ್ ಪಾರ್ಕರ್ ಅದ್ಭುತ ಪ್ರದರ್ಶನಕ್ಕೆ ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮೆಚ್ಚುಗೆ ವ್ಯಕ್ತಪಡಿಸಿದ್ದು,ಟ್ವೀಟ್ ಮಾಡಿದ್ದಾರೆ.