ಮುಂಬೈ: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಅಭಿಮನ್ಯು ಈಶ್ವರನ್ ಕನ್ನಡಿಗ ಹಾಗೂ ಮಾಜಿ ಟೀಮ್ ಇಂಡಿಯಾ ನಾಯಕ ರಾಹುಲ್ ದ್ರಾವಿಡ್ ತಮಗೆ ಮಾದರಿ ಮತ್ತು ಸ್ಪೂರ್ತಿ ಎಂದು ಹೇಳಿದ್ದಾರೆ.
ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಗಾಗಿ ಘೋಷಿಸಿದ ಮೀಸಲು ತಂಡದಲ್ಲಿ ಪಶ್ವಿಮ ಬಂಗಾಳದ ಅಭಿಮನ್ಯು ಈಶ್ವರನ್ ಆಯ್ಕೆಯಾಗಿದ್ದಾರೆ. ಇವರು 2016-2019ರ ವರೆಗೆ ರಾಹುಲ್ ದ್ರಾವಿಡ್ ಗರಡಿಯಲ್ಲಿ ಭಾರತ ಎ ತಂಡದ ಪರ ಆಡಿದ್ದರು. ಇದೀಗ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದು, ದೇಶಕ್ಕಾಗಿ ಆಡುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ತವಕದಲ್ಲಿದ್ದಾರೆ.
ರಾಹುಲ್ ದ್ರಾವಿಡ್ ನನಗೆ ಮಾದರಿ, ನಾನು ಬಾಲ್ಯದಲ್ಲಿದ್ದಾಗ ಅವರ ಬ್ಯಾಟಿಂಗ್ ನೋಡುವುದಕ್ಕಾಗಿ ಕಾಯುತ್ತಾ ಕುಳಿತಿರುತ್ತಿದ್ದೆ. ನಾನು ಭಾರತ ಎ ತಂಡಕ್ಕೆ ಆಯ್ಕೆಯಾದಂತಹ ಸಂದರ್ಭದಲ್ಲಿ ಅವರು ಕೋಚ್ ಆಗಿದ್ದು, ನನ್ನ ಅದೃಷ್ಟ. ನಾನು ಅವರಿಂದ ಸಾಕಷ್ಟನ್ನು ಕಲಿತಿದ್ದೇನೆ. ನಾನು ಕ್ರಿಕೆಟಿಗನಾಗಿ ಸಾಧನೆ ಮಾಡಲು ರಾಹುಲ್ ಸರ್ ನನಗೆ ಪ್ರೇರಣೆಯಾಗಿದ್ದಾರೆ ಎಂದು ಸ್ಪೋರ್ಟ್ ಯಾರಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಮತ್ತು ನಾಯಕ ಕೊಹ್ಲಿ ಜೊತೆಗೆ ಅಭ್ಯಾಸ ಮಾಡುವುದಕ್ಕೆ ಉತ್ಸಾಹದಿಂದಿದ್ದೇನೆ ಎಂದಿರುವ 25 ವರ್ಷದ ಯುವ ಆಟಗಾರ ಅವರಿಂದ ಕಲಿಯುವುದಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ.
ಅಭಿಮನ್ಯು ಈಶ್ವರನ್ 64 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 4,401 ರನ್ಗಳಿಸಿದ್ದಾರೆ. 62 ಏಕದಿನ ಪಂದ್ಯಗಳಲ್ಲಿ 2875 ಮತ್ತು 20 ಟಿ20 ಪಂದ್ಯಗಳಿಂದ 471 ರನ್ಗಳಿಸಿದ್ದಾರೆ.