ನವದೆಹಲಿ:ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತೊಮ್ಮೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಆದರೆ ಎಷ್ಟು ಅವಧಿ ವರೆಗೆ ಈ ಹುದ್ಧೆಯಲ್ಲಿ ಮುಂದುವರೆಯಲಿದ್ದಾರೆ ಎಂಬುದರ ಕುರಿತು ಬಿಸಿಸಿಐ ಬಹಿರಂಗ ಪಡಿಸಿಲ್ಲವಾದರೂ, 2024ರ ಜೂನ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ವರೆಗೆ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕಳೆದ 2021ರ ನವೆಂಬರ್ ತಿಂಗಳಲ್ಲಿ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ 2 ವರ್ಷದ ಅವಧಿಗೆ ಬಿಸಿಸಿಐ ನೇಮಕ ಮಾಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ (ODI) ವಿಶ್ವಕಪ್ (World Cup) ನಂತರ ಮುಖ್ಯ ಕೋಚ್ ಹುದ್ದೆಯ ಅವಧಿ ಪೂರ್ಣಗೊಂಡಿತ್ತು. ಅದಾದ ಬಳಿಕ ಈ ಹುದ್ದೆಗೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬ ಊಹಪೋಹಗಳಿಗೆ ತೆರೆ ಬಿದ್ದಿದೆ.
ಈ ಬಗ್ಗೆ ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, "ಇತ್ತೀಚೆಗೆ ಮುಕ್ತಾಯಗೊಂಡ ODI ವಿಶ್ವಕಪ್ ನಂತರ ದ್ರಾವಿಡ್ ಅವರ ಮುಖ್ಯ ಕೋಚ್ ಹುದ್ದೆಯ ಒಪ್ಪಂದದ ಅವಧಿ ಪೂರ್ಣಗೊಂಡಿತ್ತು. ಇದಾದ ಬಳಿಕ ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂದು ಚರ್ಚೆ ನಡೆಸಲಾಗಿತ್ತು. ಎಲ್ಲರ ಒಪ್ಪಿಗೆ ಪಡೆದು ನಂತರ ರಾಹುಲ್ ದ್ರಾವಿಡ್ ಅವರನ್ನೇ ಮುಖ್ಯ ಕೋಚ್ ಆಗಿ ಒಪ್ಪಂದವನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಈ ಒಪ್ಪಂದವನ್ನು ದ್ರಾವಿಡ್ ಅವರು ಒಪ್ಪಿದ್ದಕ್ಕಾಗಿ ಸಂತಸ ತಂದಿದೆ. ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.