ಭಾರತ ಕ್ರಿಕೆಟ್ ತಂಡ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆದ್ದು ಇಂದಿಗೆ ಸರಿಯಾಗಿ 10 ವರ್ಷಗಳಾಗಿವೆ. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದುಕೊಂಡಿತ್ತು. ಈ ಫೈನಲ್ ಪಂದ್ಯವು ಇತ್ತೀಚೆಗೆ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆದ ಎಡ್ಜ್‌ಬಾಸ್ಟನ್‌ನಲ್ಲೇ ನಡೆದಿತ್ತು. ಇಂಗ್ಲೆಂಡ್ ತಂಡವನ್ನು ಅವರ ನೆಲದಲ್ಲಿ ಸೋಲಿಸಿ ಭಾರತ ವಿಜಯೋತ್ಸವ ಆಚರಿಸಿತ್ತು.
3 ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಧೋನಿ: ಈ ಗೆಲುವಿನಿಂದ ಧೋನಿ ಹೊಸ ದಾಖಲೆಯನ್ನೂ ಬರೆದಿದ್ದರು. ಐಸಿಸಿ ನಡೆಸುವ ಎಲ್ಲ ಪ್ರತಿಷ್ಠಿತ ಕಪ್ಗಳನ್ನು ಜಯಿಸಿದ ಮೊದಲ ನಾಯಕರಾಗಿ ಹೊರ ಹೊಮ್ಮಿದ್ದರು. 2007ರಲ್ಲಿ ಧೋನಿ ಅವರ ಮೊದಲ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತ್ತು. 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಎಂಎಸ್ಡಿ ಮುಂದಾಳತ್ವದಲ್ಲೇ ಭಾರತ ಗೆದ್ದುಕೊಂಡಿತ್ತು. 2013ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು.
5 ರನ್ಗಳಿಂದ ಅಮೋಘ ಗೆಲುವು: ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಮಳೆಯಿಂದಾಗಿ 50 ಓವರ್ಗಳ ಏಕದಿನ ಮಾದರಿಯ ಪಂದ್ಯ ಟಿ20 ರೂಪ ಪಡೆದುಕೊಂಡಿತ್ತು. 30 ಓವರ್ಗಳನ್ನು ಕಡಿತಗೊಳಿಸಿ 20 ಓವರ್ಗಳ ಪಂದ್ಯ ಆಡಿಸಲಾಗಿತ್ತು.
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಎಸೆತದವರೆಗೂ ಸೆಣಸಾಡಿ ಭಾರತ ಜಯಭೇರಿ ಬಾರಿಸಿತ್ತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 129/7 ಮಾತ್ರ ಗಳಿಸಿತ್ತು. ವಿರಾಟ್ ಕೊಹ್ಲಿ (43), ರವೀಂದ್ರ ಜಡೇಜಾ (33) ಮತ್ತು ಶಿಖರ್ ಧವನ್ (31) ಮಿಂಚಿದ್ದರು. ಪಂದ್ಯದಲ್ಲಿ ನಾಯಕ ಎಂ.ಎಸ್. ಧೋನಿ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದರು. ವಿರಾಟ್- ಜಡ್ಡು ಆರನೇ ವಿಕೆಟ್‌ಗೆ 47 ರನ್ ಸೇರಿಸಿದ್ದು ತಂಡಕ್ಕೆ ಸಹಕಾರಿಯಾಗಿತ್ತು.