ಕಾನ್ಪುರ :ರಚಿನ್ ರವೀಂದ್ರ ಮತ್ತು ಅಜಾಜ್ ಪಟೇಲ್ ಅವರ ಕೆಚ್ಚೆದೆಯ ಹೋರಾಟದ ನೆರವಿನಿಂದ ನ್ಯೂಜಿಲ್ಯಾಂಡ್ 12 ವರ್ಷಗಳ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಸೋಲು ತಪ್ಪಿಸಿಕೊಂಡು ಡ್ರಾ ಸಾಧಿಸಿದೆ. 2010ರ ನಂತರ ಆಡಿದ್ದ ಎಲ್ಲಾ ಪಂದ್ಯಗಳಲ್ಲೂ ಕಿವೀಸ್ ಸೋಲುಂಡಿತ್ತು.
ಮೊದಲ ಟೆಸ್ಟ್ನ ಕೊನೆಯ ದಿನವಾದ ಸೋಮವಾರ ನ್ಯೂಜಿಲ್ಯಾಂಡ್ ಸೋಲು ತಪ್ಪಿಸಿಕೊಳ್ಳಲು ದಿನಪೂರ್ತಿ ಆಡಬೇಕಿತ್ತು. ಅಥವಾ ಗೆಲುವು ಸಾಧಿಸಲು 280 ರನ್ ಗಳಿಸಬೇಕಿತ್ತು. ಮೊದಲ ಸೆಷನ್ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಸುಲಭವಾಗಿ ಡ್ರಾ ಸಾಧಿಸುವ ಆಲೋಚನೆಯಲ್ಲಿತ್ತು.
ಮೂರನೇ ಸೆಷನ್ನಲ್ಲಿ ಅಶ್ವಿನ್-ಜಡೇಜಾ ದಾಳಿಗೆ ಸಿಲುಕಿ ದಿಢೀರ್ 9 ವಿಕೆಟ್ ಕಳೆದುಕೊಂಡಿತ್ತು. ಆದರೆ, ರವೀಂದ್ರ 91 ಎಸೆತಗಳಲ್ಲಿ ಅಜೇಯ 18 ರನ್ ಹಾಗೂ ಅಜಾಜ್ ಪಟೇಲ್ 23 ಎಸೆತಗಳಲ್ಲಿ ಅಜೇಯ 2 ರನ್ಗಳಿಸಿ ಪಂದ್ಯವನ್ನು ಡ್ರಾ ಸಾಧಿಸಲು ನೆರವಾದರು.