ನವದೆಹಲಿ:ವಿಶ್ವ ಕ್ರಿಕೆಟ್ನಲ್ಲಿ ಅತಿ ಶ್ರೀಮಂತ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಒಂದಿಲ್ಲೊಂದು ಹೊಸ ನಿಯಮವನ್ನು ಪರಿಚಯಿಸುತ್ತಲೇ ಇರುತ್ತದೆ. 'ಇಂಪ್ಯಾಕ್ಟ್ ಪ್ಲೇಯರ್' ಪರಿಚಯಿಸಿದ ಬಳಿಕ ಇದೀಗ ಇನ್ನೊಂದು ಹೊಸ ನಿಯಮವನ್ನು ತರಲಾಗಿದೆ. ಟಾಸ್ ಬಳಿಕವೂ ತಂಡದ ನಾಯಕ ರೆಫ್ರಿಯ ಗಮನಕ್ಕೆ ತಂದು ಆಡುವ 11 ಆಟಗಾರರನ್ನು ಬದಲಿಸಬಹುದು.
ನಿಯಮದಂತೆ ಟಾಸ್ ವೇಳೆ ಅಂಪೈರ್ಗಳಿಗೆ ಆಡುವ ಹನ್ನೊಂದು ಆಟಗಾರರ ಪಟ್ಟಿಯನ್ನು ನೀಡಬೇಕು. ಬಳಿಕ ಅದನ್ನು ಬದಲಾವಣೆ ಮಾಡುವಂತಿಲ್ಲ. ಆಟಗಾರ ಗಾಯಗೊಂಡು ನಿವೃತ್ತಿಯಾದರೂ ಇನ್ನೊಬ್ಬರನ್ನು ಕಣಕ್ಕಿಳಿಸುವ ಹಾಗಿಲ್ಲ. ಆದರೆ, ಈ ನಿಯಮಕ್ಕೀಗ ತಿದ್ದುಪಡಿ ಮಾಡಲಾಗಿದೆ.
ಟಾಸ್ ಆದ ಬಳಿಕ ತಂಡಗಳ ನಾಯಕರು ಆಡುವ ಪ್ಲೇಯಿಂಗ್ 11 ಬಳಗ ಮತ್ತು 5 ಬದಲಿ ಆಟಗಾರರ ಪಟ್ಟಿಯನ್ನು ಮ್ಯಾಚ್ ರೆಫ್ರಿಗೆ ಬರವಣಿಗೆ ಮೂಲಕ ನೀಡಬೇಕು. ಅದನ್ನು ರೆಫ್ರಿ ಘೋಷಿಸಿದ ಬಳಿಕ ತಂಡವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವಂತಿಲ್ಲ. ಬದಲಾವಣೆ ಮಾಡಬೇಕು ಎಂದಿನಿಸಿದಲ್ಲಿ ಎದುರಾಳಿ ತಂಡದ ನಾಯಕನ ಒಪ್ಪಿಗೆ ಪಡೆಯಬೇಕು.
ಹೊಸ ನಿಯಮದ ಅನುಸಾರ, ಟಾಸ್ ಆದ ಬಳಿಕ ಮೈದಾನದ ಸ್ಥಿತಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮೊದಲೇ ನೀಡಿದ ಪಟ್ಟಿಯಂತೆ ಆಡುವ ಹನ್ನೊಂದರಲ್ಲಿ ಬದಲಾವಣೆ ಮಾಡಬೇಕು ಎಂದು ನಾಯಕನಿಗೆ ಅಥವಾ ಕೋಚ್ಗೆ ಅನ್ನಿಸಿದಲ್ಲಿ ಅದನ್ನು ಬದಲಿಸಬಹುದಾಗಿದೆ. ಆದರೆ, ಇದನ್ನು ಪಂದ್ಯ ಆರಂಭಕ್ಕೂ ಮೊದಲೇ ಮಾಡಬೇಕು. ಪಂದ್ಯದಲ್ಲ ಮಧ್ಯದಲ್ಲಿ ಯಾವುದೇ ಪ್ಲೇಯರ್ ಬದಲಾವಣೆ ಮಾಡುವಂತಿಲ್ಲ.
ವಿಕೆಟ್ ಕೀಪರ್ ಮೇಲೆ ನಿಗಾ:ಇನ್ನೊಂದು ನಿಯಮದಂತೆ, ಚೆಂಡು ಬ್ಯಾಟ್ಗೆ ತಾಗುವುದಕ್ಕೂ ಮೊದಲು ವಿಕೆಟ್ ಕೀಪರ್ ಕ್ರೀಸ್ ಬಿಟ್ಟರೆ, ಅದು ಕ್ರೀಡಾ ಮೋಸ ಎಂದು ಪರಿಗಣಿತವಾಗುತ್ತದೆ. ವಿಕೆಟ್ ಕೀಪರ್ ಯಾವುದೇ ಸೂಚನೆ ಇಲ್ಲದೆ ಚೆಂಡು ತೂರಿ ಬರುವ ಮೊದಲೇ ಚಲಿಸಿದರೆ ಅದರ ವಿರುದ್ಧ ಅಂಪೈರ್ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾನೆ.