ಬ್ರಿಸ್ಟಲ್: ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ಸಂಪೂರ್ಣ ವೈಫಲ್ಯ ಅನುಭವಿಸಿತು. ಇದೇ ಕಾರಣಕ್ಕೆ ತಂಡ ಆತಿಥೇಯರ ವಿರುದ್ಧ 8 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 1-0 ಪಾಯಿಂಟುಗಳ ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಈ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್, " ಪಂದ್ಯದ ಸೋಲಿಗೆ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯವೇ ಕಾರಣ" ಎಂದು ಹೇಳಿದರು.
"ನಮ್ಮ ತಂಡ ಒಬ್ಬರೇ ವೇಗದ ಬೌಲರ್ ಜುಲಾನ್ ಗೋಸ್ವಾಮಿ ಮೇಲೆ ಹೆಚ್ಚು ಅವಲಂಭಿತವಾಗಿದೆ. ಇದು ಭವಿಷ್ಯದಲ್ಲಿ ಯುವ ವೇಗಿಗಳನ್ನು ಸಜ್ಜುಗೊಳಿಸುವ ಸಮಯಕ್ಕೆ ಮುನ್ನುಡಿ ಬರೆದಿದೆ" ಎಂದು ಅವರು ಹೇಳಿದರು.
ಬ್ಯಾಟಿಂಗ್ ವಿಭಾಗದಲ್ಲಿ ತಂಡ ದೊಡ್ಡ ಮಟ್ಟದ ವೈಫಲ್ಯ ಅನುಭವಿಸಿದ್ದು, 300 ಎಸೆತಗಳಲ್ಲಿ ಭಾರತೀಯ ಆಟಗಾರ್ತಿಯರು ಬರೋಬ್ಬರಿ 181 ಡಾಟ್ ಬಾಲ್ಗಳನ್ನಾಡಿದ್ದಾರೆ. ಇದು ಪಂದ್ಯ ಸೋಲಲು ಪ್ರಮುಖ ಕಾರಣವಾಗಿದೆ. ಇತ್ತ ಇಂಗ್ಲೆಂಡ್ ಆಟಗಾರ್ತಿಯರು 91 ಎಸೆತಗಳು ಬಾಕಿ ಇರುವಂತೆ ಪಂದ್ಯವನ್ನು ಮುಗಿಸಿದರು.
ಇದನ್ನೂ ಓದಿ : ಏಕದಿನ ಪಂದ್ಯ : ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗಳಿಂದ ಹೀನಾಯ ಸೋಲು ಕಂಡ ಮಿಥಾಲಿ ಪಡೆ
ಈ ಬಗ್ಗೆ ಪ್ರತಿಕ್ರಿಯಿಸಿದ ಮಿಥಾಲಿ ರಾಜ್, "ನಾವು ಈ ಅಂಶವನ್ನು ಗಮನಿಸಬೇಕು ಮತ್ತು ಸ್ಟ್ರೈಕ್ ಅನ್ನು ಮುಂದುವರಿಸಬೇಕು. ನಮ್ಮ ತಂಡಕ್ಕೆ ಟಾಪ್-5 ಬ್ಯಾಟ್ಸ್ಮನ್ಗಳು ಬೇಕಾಗಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಹೆಚ್ಚು ಅನುಭವಿ ಬ್ಯಾಟ್ಸ್ಮನ್ಗಳಿದ್ದಾರೆ. ಇಲ್ಲಿನ ಪರಿಸ್ಥಿತಿಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎನ್ನುವುದು ಅವರಿಗೆ ತಿಳಿದಿದೆ" ಎಂದರು.
"ನಮ್ಮ ತಂಡದಲ್ಲಿ ಹೆಚ್ಚು ವೇಗಿಗಳಿಲ್ಲ, ನಾವು ಆರಂಭಿಕ ವಿಕೆಟ್ ಪಡೆದರೆ ವಿರೋಧಿ ತಂಡದ ಮೇಲೆ ಒತ್ತಡ ಹೇರಬಹುದು. ಅವರು ವಿಕೆಟ್ ಪಡೆಯದಿದ್ದರೆ ಅದು ಸ್ಪಿನ್ನರ್‌ಗಳ ಮೇಲೆ ಒತ್ತಡ ಬೀರುತ್ತದೆ. ಆದ್ದರಿಂದ ನಾವು ಜುಲಾನ್ ಹೊರತುಪಡಿಸಿ ವೇಗಿಗಳನ್ನು ಸಜ್ಜುಗೊಳಿಸಬೇಕಾಗಿದೆ. ಪರಿಸ್ಥಿತಿಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡುವುದು ಹೇಗೆ ಎಂಬುದರ ಬಗ್ಗೆ ಅವರು ಕಲಿಯಬೇಕು" ಎಂದರು.
"ಎರಡನೇ ಏಕದಿನ ಪಂದ್ಯದಲ್ಲಿ 11 ಆಟಗಾರರ ಸಂಯೋಜನೆಯಲ್ಲಿ ಕೆಲವು ಬದಲಾವಣೆಗಳಿರಬಹುದು ಎಂದು ಸುಳಿವು ನೀಡಿದ ರಾಜ್, ತಂಡದ ಆಡಳಿತವೂ ಸಹ ಆಟಗಾರರನ್ನು ಬೆಂಬಲಿಸುವ ಅಗತ್ಯವಿದೆ" ಎಂದು ಹೇಳಿದರು.
"ವಿಶೇಷವಾಗಿ ಹಿಂದೆ ಉತ್ತಮವಾಗಿ ಆಡಿದ ಆಟಗಾರರನ್ನು ಬೆಂಬಲಿಸುವುದು ಬಹಳ ಮುಖ್ಯ. ಕೆಲವೊಮ್ಮೆ ಸ್ಟ್ರೋಕ್ ಆಟಗಾರರನ್ನು ಆಡಿಸುವುದು ಒಂದು ಜೂಜು. ಆದರೆ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಟಗಾರರನ್ನು ಗುರುತಿಸಿ ನಾವು ಅವರನ್ನು ಬೆಂಬಲಿಸಬೇಕಾಗಿದೆ. ನಾಯಕಿ, ಕೋಚ್ ಮತ್ತು ಸಹಾಯಕ ಸಿಬ್ಬಂದಿಗಳಲ್ಲದೆ, ಆಯ್ಕೆದಾರರು ಸಹ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ ಮತ್ತು ನಾವು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ಮಿಥಾಲಿ ಹೇಳಿದರು.