ಪರ್ತ್ (ಆಸ್ಟ್ರೇಲಿಯಾ): 6ನೇ ಬಾರಿಗೆ ವಿಶ್ವಕಪ್ ಗೆದ್ದ ನಂತರ ಆಸ್ಟ್ರೇಲಿಯಾ ಆಟಗಾರರ ಕೆಲ ನಡೆಗಳು ಚರ್ಚೆಗೆ ಕಾರಣವಾಯಿತು. ಪದಕ ಸ್ವೀಕರಿಸುವ ವೇಳೆ ಕೆಲ ಆಟಗಾರರು ವೇದಿಕೆಯಲ್ಲಿದ್ದ ಗಣ್ಯರ ಕೈಕುಲುಕದೇ ಅಗೌರವದಿಂದ ನಡೆದುಕೊಂಡಿದ್ದರು. ಇದಲ್ಲದೇ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆಯೇ ಕಾಲಿರಿಸಿ ದರ್ಪ ಮೆರೆದಿದ್ದರು. ಈಗ ಖಾಸಗಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾರ್ಷ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
13ನೇ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿಗೆ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಸಂಭ್ರಮಾಚರಣೆಯ ಫೋಟೋಗಳನ್ನು ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಸಮಾಜಿಕ ಜಾತಲಾಣವಾದ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ವಿಶ್ವಕಪ್ ಟ್ರೋಫಿಯ ಮೇಲೆ ಮಾರ್ಷ್ ಕಾಲಿಟ್ಟು ಕುಳಿತ ಫೋಟೋ ವೈರಲ್ ಆಗಿದ್ದಲ್ಲದೇ, ಕ್ರಿಕೆಟ್ ಅಭಿಮಾನಿಗಳ ತೀವ್ರ ಟೀಕೆಗೆ ಕಾರಣವಾಯಿತು.
ಭಾರತ ವಿಶ್ವಕಪ್ ತಂಡದಲ್ಲಿದ್ದ ವೇಗಿ ಮೊಹಮ್ಮದ್ ಶಮಿ "ವಿಶ್ವದ ಎಲ್ಲ ತಂಡಗಳು ಹೋರಾಡುವ ಟ್ರೋಫಿ, ನಿಮ್ಮ ತಲೆಯ ಮೇಲೆ ಎತ್ತಲು ಬಯಸುವ ಟ್ರೋಫಿ, ಆ ಟ್ರೋಫಿಯ ಮೇಲೆ ಕಾಲು ಇಡುವುದು ನನಗೆ ಸಂತೋಷವನ್ನು ನೀಡಲಿಲ್ಲ" ಎಂದು ಹೇಳಿದ್ದರು.
"ಆ ಫೋಟೋದಲ್ಲಿ ನಿಸ್ಸಂಶಯವಾಗಿ ಯಾವುದೇ ಅಗೌರವ ಇರಲಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ, ಅದು ಚರ್ಚೆ ಆಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದರೂ ನಾನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ನೋಡಿಲ್ಲ. ಅದರಲ್ಲಿ ಏನೂ ಇಲ್ಲ" ಎಂದು ಆ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.