ಬೆಂಗಳೂರು :ಕೆ ವಿ ಸಿದ್ದಾರ್ಥ್ ಶತಕದ ಬಲದಿಂದ ಮಹಾರಾಜ ಟ್ರೋಫಿಯ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ 23 ರನ್‌ಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಸತತ ನಾಲ್ಕು ಸೋಲುಗಳೊಂದಿಗೆ ಹಾಲಿ ರನ್ನರ್ ಅಪ್ ಬೆಂಗಳೂರಿಗೆ ಭಾರಿ ಮುಖಭಂಗ ಎದುರಾಗಿದೆ.
ಮಂಗಳೂರು ಡ್ರ್ಯಾಗನ್ಸ್ ಪರ ಬ್ಯಾಟಿಂಗ್‌ನಲ್ಲಿ ಕೆ ವಿ ಸಿದ್ಧಾರ್ಥ್ (100*), ಬಿ ಯು ಶಿವಕುಮಾರ್ (40) ಮತ್ತು ಅನಿರುದ್ಧ ಜೋಶಿ (31*), ಬೌಲಿಂಗ್‌ನಲ್ಲಿ ಆದಿತ್ಯ ಗೋಯಲ್ (3/35) ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಸಂಕಲ್ಪ್ ಶೆಟ್ಟೆಣ್ಣವರ್ (2/20) ಮಿಂಚಿನ ಪ್ರದರ್ಶನ ತೋರಿ ಗೆಲುವಿನ ರೂವಾರಿಗಳಾಗಿ ಮಿಂಚಿದರು.
ಬ್ಯಾಟಿಂಗ್ ಆಯ್ದುಕೊಂಡ ಮಂಗಳೂರು ಡ್ರಾಗನ್ಸ್ ತಂಡ ಮತ್ತೊಮ್ಮೆ ಸ್ಫೋಟಕ ಆಟ ಪ್ರದರ್ಶಿಸಿತು. ಆರಂಭಿಕ ಆಟಗಾರ ರೋಹನ್ ಪಾಟೀಲ್ 8 ರನ್ ಗಳಿಸಿ ರನ್ ಔಟ್‌ಗೆ ಬಲಿಯಾದರೆ ನಂತರ ಬಂದ ಶರತ್ ಬಿ.ಆರ್ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬಿ ಯು ಶಿವಕುಮಾರ್ (40) ಹಾಗೂ ಅನಿರುದ್ಧ್ ಜೋಶಿ (31*) ಅವರೊಂದಿಗೆ ಉತ್ತಮ ಜೊತೆಯಾಟವಾಡಿದ ಕೆ.ವಿ ಸಿದ್ಧಾರ್ಥ್ 4 ಭರ್ಜರಿ ಸಿಕ್ಸರ್ 9 ಬೌಂಡರಿಗಳ ಸಹಿತ ಅಜೇಯ ಶತಕ ((100*) ಸಿಡಿಸಿದರು.
ಶತಕ ಬಾರಿಸಿ ಸಿದ್ಧಾರ್ಥ್ ಸಂಭ್ರಮ ಸಿದ್ದಾರ್ಥ್ ಹಾಗೂ ಅನಿರುದ್ಧ್ ಜೋಡಿ 4ನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟವಾಡುವ ಮೂಲಕ ಮಂಗಳೂರು ತಂಡ 3 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಬೆಂಗಳೂರು ಪರ ಕುಮಾರ್ ಎಲ್.ಆರ್ ಮತ್ತು ರಿಷಿ ಬೋಪಣ್ಣ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಬೆಂಗಳೂರಿಗೆ ಆರಂಭದಲ್ಲೇ ಜೆಸ್ವಂತ್ ಆಚಾರ್ಯ (5) ಮತ್ತು ಮಯಾಂಕ್ ಅಗರ್ವಾಲ್ (0) ವಿಕೆಟ್ ಪಡೆಯುವ ಮೂಲಕ ಮಂಗಳೂರು ಪರ ಚೊಚ್ಚಲ ಪಂದ್ಯವನ್ನಾಡಿದ ಸಂಕಲ್ಪ್ ಶೆಟ್ಟೆಣ್ಣವರ್ ಶಾಕ್ ನೀಡಿದರು. ನಂತರ ಬಂದ ಪವನ್ ದೇಶಪಾಂಡೆ 3 ರನ್‌ಗೆ ಪೆವಿಲಿಯನ್ ಸೇರಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಡಿ.ನಿಶ್ಚಲ್ (61) ಅರ್ಧ ಶತಕ ಬಾರಿಸಿದರು. ಈ ಹಂತದಲ್ಲಿ ಜೊತೆಯಾದ ಶುಭಾಂಗ್ ಹೆಗ್ಡೆ 45 ರನ್ ಗಳಿಸುವ ಮೂಲಕ ಬೆಂಗಳೂರಿಗೆ ಚೇತರಿಕೆ ನೀಡಿದರು.
ನಿಶ್ಚಲ್ ಹಾಗೂ ಶುಭಾಂಗ್ ಜೋಡಿಯ 74 ರನ್‌ಗಳ ಜೊತೆಯಾಟದ ನಂತರ, ಬೆಂಗಳೂರು 14 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿತ್ತು. ಆದರೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ನಿಶ್ಚಲ್ ಆನಂದ್ ದೊಡ್ಡಮನಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. 6ನೇ ಕ್ರಮಾಂಕದಲ್ಲಿ ಬಂದ ಸೂರಜ್ ಅಹುಜಾ ಅವರು ಕೇವಲ 14 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಶುಭಾಂಗ್ ಹೆಗ್ಡೆ (45) ಮತ್ತು ರಿಷಿ ಬೋಪಣ್ಣ (0) ಅವರನ್ನು ಒಬ್ಬರ ಹಿಂದೊಬ್ಬರಂತೆ ಔಟ್ ಮಾಡುವ ಮೂಲಕ ಆದಿತ್ಯ ಗೋಯಲ್ ಬೆಂಗಳೂರಿನ ರನ್ ಚೇಸ್ ವಿಫಲವಾಗುವಂತೆ ಮಾಡಿದರು. ಅಂತಿಮವಾಗಿ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ:ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗಕ್ಕೆ ಮೊದಲ ಸೋಲು; 12 ರನ್‌ಗಳಿಂದ ಗೆದ್ದು ಬೀಗಿದ ಮೈಸೂರು