ಮೈಸೂರು:ಆರಂಭಿಕ ಆಟಗಾರರಾದ ದೇವದತ್ತ ಪಡಿಕ್ಕಲ್ ಹಾಗೂ ರೋಹನ್ ಪಾಟೀಲ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ 9 ವಿಕೆಟ್ ಜಯ ಗಳಿಸಿತು. 146 ರನ್ ಗುರಿಯನ್ನು ಗುಲ್ಬರ್ಗ ಇನ್ನೂ 20 ಎಸೆತ ಬಾಕಿ ಇರುವಾಗಲೇ ತಲುಪಿತು.
ನಿನ್ನೆಯ ಪಂದ್ಯದಲ್ಲಿ ಅಜೇಯ 112 ರನ್ ಸಿಡಿಸಿ ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದ ರೋಹನ್ ಪಾಟೀಲ್ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 61 ರನ್ ಗಳಿಕೆಯೊಂದಿಗೆ ಜಯ ತಂದಿತ್ತರು. ಕೇವಲ 40 ಎಸೆತಗಳೆನ್ನೆದುರಿಸಿದ ರೋಹನ್ ಪಾಟೀಲ್ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರಲ್ಲದೇ, ಜಸ್ವತ್ ಆಚಾರ್ಯ (17*) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಕಲೆಹಾಕಿದರು. ಕೌಶಿಕ್ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರೋಹನ್ ತಾನೊಬ್ಬ ಮ್ಯಾಚ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
146 ರನ್ ಜಯದ ಗುರಿಹೊತ್ತ ಗುಲ್ಬರ್ಗ ಮಿಸ್ಟಿಕ್ಸ್‌ಗೆ ಅನುಭವಿ ಆಟಗಾರ ದೇವದತ್ತ ಪಡಿಕ್ಕಲ್ ಸ್ಫೋಟಕ 62 ರನ್ ಸಿಡಿಸಿ ಜಯಕ್ಕೆ ಅಗತ್ಯವಿರುವ ಉತ್ತಮ ವೇದಿಕೆ ನಿರ್ಮಿಸಿಕೊಟ್ಟರು. ನಿನ್ನೆಯ ದಿನ ಅಜೇಯ ಶತಕ ಸಿಡಿಸಿದ್ದ ರೋಹನ್ ಪಾಟೀಲ್ ಜೊತೆ ಸೇರಿ ಪಡಿಕ್ಕಲ್ 91 ರನ್ ಜೊತೆಯಾಟವಾಡಿದರು. ಪಡಿಕ್ಕಲ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಟೈಗರ್ಸ್ ನಾಯಕ ಅಭಿಮನ್ಯು ಮಿಥುನ್ ಈ ಉತ್ತಮ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು.
ಸಾಧಾರಣ ಮೊತ್ತ ಗಳಿಸಿದ ಟೈಗರ್ಸ್:ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಲ್ಬರ್ಗ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 145 ರನ್‌ಗೆ ಕಟ್ಟಿ ಹಾಕಿತು. ನಾಯಕ ಅಭಿಮನ್ಯು ಮಿಥುನ್ ಅನುಭವಿ ಆಟಗಾರ ಮೊಹಮ್ಮದ್ ತಾಹಗೆ ಅವಕಾಶ ನೀಡಿದರು. ಆದರೆ ತಾಹ ಕೇವಲ 15 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮನೋಜ್ ಭಾಂಡಗೆ ಬೇಗನೆ ಅರಂಭಿಕ ಜೊತೆಯಾಟ ಮುರಿಯುವಲ್ಲಿ ಸಫಲರಾದರು.