ಮುಂಬೈ: 15ನೇ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಭಾರತದ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಆರ್ಸಿಬಿ ಆಟಗಾರನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರು ಭಾರತ ತಂಡದಲ್ಲಿ ಫಿನಿಶರ್ ರೋಲ್ ನಿರ್ವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಪರ ಅವಕಾಶ ಪಡೆದಿರುವ ಕಾರ್ತಿಕ್, ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆಡಿರುವ ಎಲ್ಲಾ ಪಂದ್ಯಗಳಲ್ಲೂ ಚೆಂಡನ್ನು ಲೀಲಾಜಾಲವಾಗಿ ದಂಡಿಸುತ್ತಿದ್ದಾರೆ. ಮಾಜಿ ಕೆಕೆಆರ್ ನಾಯಕ ಈ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕ್ರಮವಾಗಿ 32*(14),14*(7), 44*(23), 7*(2), 34(14) ಮತ್ತು 66(34) ರನ್ಗಳಿಸಿದ್ದಾರೆ. ಅವರ ಸ್ಟ್ರೈಕ್ರೇಟ್ 209 ಮತ್ತು ಸರಾಸರಿ 197 ಇದೆ. ವಿಶೇಷವೆಂದರೆ, ಕೇವಲ ಒಂದು ಪಂದ್ಯದಲ್ಲಿ ಮಾತ್ರ ವಿಕೆಟ್ ಒಪ್ಪಿಸಿರುವ ಅವರು ತಂಡದ ಮಧ್ಯಮ ಕ್ರಮಾಂಕದ ಬಲ ಮತ್ತು ಫಿನಿಶರ್ ಆಗಿ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಬೇಕೆಂದು ಬಯಸುತ್ತಿರುವುದಾಗಿ ಕಾರ್ತಿಕ್ ಈಗಾಗಲೇ ಹೇಳಿದ್ದಾರೆ. ನಾನು ಹೇಳುವುದೇನೆಂದರೆ, ಅವರ ವಯಸ್ಸಿನ ಕಡೆ ನೋಡಬಾರದು, ಅವರು ಯಾವ ರೀತಿ ಪ್ರದರ್ಶನ ಹೊರಹಾಕುತ್ತಿದ್ದಾರೆ ಎನ್ನುವುದರ ಕಡೆಗೆ ನೋಡಿ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.