ನವದೆಹಲಿ: ಒಂದು ತಿಂಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕರು ಮತ್ತು ತಂಡದಲ್ಲಿ ಸಂತೋಷದ ಅಲೆ ಇತ್ತು. ಇದಕ್ಕೆ ಕಾರಣ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಎರಡು ಪ್ರಾಂಚೈಸಿಯ ತಂಡಗಳು ಅದ್ಭುತ ಪ್ರದರ್ಶನ ನೀಡಿದ್ದಾಗಿತ್ತು. ಎರಡೂ ತಂಡಗಳು ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದವು. ಆದರೆ ಮೆನ್ಸ್ ಟೀಮ್ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಮೂರು ಪಂದ್ಯಗಳಿಂದ ಸೋತು ಅಂಕ ಪಟ್ಟಿಯ 10 ನೇ ಸ್ಥಾನಕ್ಕೆ ಕುಸಿದಿದ್ದರೆ, ಮುಂಬೈ ಇಂಡಿಯನ್ಸ್ ಆಡಿದ ಎರಡು ಪಂದ್ಯವನ್ನೂ ಸೋತು 9ನೇ ಸ್ಥಾನದಲ್ಲಿದೆ. ಇಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಎರಡೂ ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು, ಮಂಗಳವಾರ ಯಾರಿಗೆ ವಿಜಯ ಲಕ್ಷ್ಮಿ ಒಲಿಯುತ್ತಾಳೆ ಕಾದು ನೋಡಬೇಕಿದೆ.
ವಾರ್ನರ್ ಏಕಾಂಗಿ ಹೋರಾಟ: ಸೋತ ಮೂರು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ತಂಡದಲ್ಲಿ ಅವರಿಗೆ ಯಾವ ಆಟಗಾರನೂ ಸಾಥ್ ನೀಡುತ್ತಿಲ್ಲ. ಪೃಥ್ವಿ ಶಾ ಮತ್ತು ಲಲಿತ್ ಯಾದವ್ ಅವರ ಬ್ಯಾಟ್ಗಳಿ ರನ್ ಬರ ಎದುರಿಸುತ್ತಿವೆ. ವಾರ್ನರ್ ಕಟ್ಟಿ ಹಾಕಲು ಜೋಫ್ರಾ ಆರ್ಚರ್ ಇಲ್ಲದಿರುವುದು ಮುಂಬೈಯನ್ನು ಇನ್ನಷ್ಟು ಕಠಿಣ ಪರಿಸ್ಥಿತಿಗೆ ದೂಡಿದೆ. ಐಪಿಎಲ್ನಲ್ಲಿ ವಾರ್ನರ್ ಮತ್ತು ಪೃಥ್ವಿ ಶಾ ಜೋಫ್ರಾ ಆರ್ಚರ್ಗೆ ಎರಡು ಬಾರಿ ಔಟಾದ ಇತಿಹಾಸ ಇತ್ತು. ಈ ಜೋಡಿಯನ್ನು ಇಂದು ಯಾರು ಕಾಡುತ್ತಾರೆ ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಜೊತೆಯಲ್ಲಿ ಬೌಲಿಂಗ್ನಲ್ಲೂ ವಿಫಲವಾಗಿದೆ. ಎರಡು ಪಂದ್ಯದಲ್ಲಿ ಕೇವಲ 5 ವಿಕೆಟ್ ಮಾತ್ರ ಪಡೆದು ಕೊಂಡಿದೆ. ಬೂಮ್ರಾ ಇಲ್ಲದ ಪಡೆ ಬೌಲಿಂಗ್ನಲ್ಲಿ ಎಡವುತ್ತಿದೆ. ಅತ್ತ ಬ್ಯಾಟಿಂಗ್ನಲ್ಲಿ ತಿಲಕ್ ವರ್ಮ ಆರ್ಸಿಬಿ ಮುಂದೆ ಆಡಿದ್ದಾರೆ, ಆದರೆ, ಅವರಿಗೆ ತಂಡದಲ್ಲಿ ಯಾರೂ ಸಾಥ್ ನೀಡುತ್ತಿಲ್ಲ. ರೋಹಿತ್ ಶರ್ಮಾ, ಇಶಾನ್ ಕಿಶನ್ ಸಹ ರನ್ ಬರ ಎದುರಿಸುತ್ತಿದ್ದಾರೆ. ಮುಂಬೈ ಇಂಡಿಯನ್ನು ಕಟ್ಟಿಹಾಕಲು ಡೆಲ್ಲಿ ಪಾಳಯದಲ್ಲಿ ಅಕ್ಷರ್ ಪಟೇಲ್ ಇದ್ದಾರೆ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅಕ್ಷರ್ ವಿರುದ್ಧ ಉತ್ತಮ ಸ್ಟ್ರೈಕ್ ರೇಟ್ ಹೊಂದಿಲ್ಲ.