ಮುಂಬೈ(ಮಹಾರಾಷ್ಟ್ರ) :ಕ್ರಿಕೆಟ್‌ನ ಆಳವಾದ ವಿಶ್ಲೇಷಣೆಗೆ ಹೆಸರಾದ ಲೆಜೆಂಡರಿ ಕ್ರಿಕೆಟಿಗ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಇಂಗ್ಲಿಷ್ ಕಾಮೆಂಟೇಟರ್ ಅಲನ್ ವಿಲ್ಕಿನ್ಸ್ ಅವರ ಬಳಿ ಕೊಹಿನೂರ್ ವಜ್ರದ ಬಗ್ಗೆ ಪ್ರಸ್ತಾಪಿಸಿ, ಆ ವಜ್ರವನ್ನು ನಿಮ್ಮ ಪ್ರಭಾವ ಬಳಸಿ ಭಾರತಕ್ಕೆ ತಲುಪುವಂತೆ ಮಾಡಿ ಎಂದು ಜೋಕ್ ಮಾಡಿರುವ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ಪಂದ್ಯದ ವೇಳೆಯ ಇಂಥದ್ದೊಂದು ಸನ್ನಿವೇಶ ಜರುಗಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಪಂದ್ಯದ ವೇಳೆ ಗವಾಸ್ಕರ್ ಮತ್ತು ವಿಲ್ಕಿನ್ಸ್ ಕಾಮೆಂಟರಿ ಮಾಡುತ್ತಿದ್ದರು. ಪಂದ್ಯದ ವಿರಾಮದ ವೇಳೆ ಮುಂಬೈನಲ್ಲಿ ಸುಂದರವಾಗಿ ಬೆಳಗಿದ ಮರೈನ್ ಡ್ರೈವ್ ಅನ್ನು ತೋರಿಸಲಾಗುತ್ತಿತ್ತು. ಈ ವೇಳೆ ಮರೈನ್ ಡ್ರೈವ್ ಅನ್ನು ಇಂಗ್ಲೆಂಡ್ ರಾಣಿಯ ನೆಕ್ಲೆಸ್ಗೆ ಗವಾಸ್ಕರ್ ಹೋಲಿಕೆ ಮಾಡಿದರು. ನಂತರ ಮುಂದುವರೆದಂತೆ 'ನಾವು ಇನ್ನೂ ಕೊಹಿನೂರ್ ವಜ್ರಕ್ಕೆ ಕಾಯುತ್ತಿದ್ದೇವೆ. ನಿಮ್ಮ ವಿಶೇಷ ಪ್ರಭಾವ ಬಳಸಿ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ಸಿಗುವಂತೆ ಮಾಡಿ ' ಎಂದು ಅಲನ್ ವಿಲ್ಕಿನ್ಸ್ ಜೊತೆಗೆ ಜೋಕ್ ಮಾಡಿದ್ದಾರೆ.