ಅಲಿಗಢ (ಉತ್ತರ ಪ್ರದೇಶ):ಕೆಕೆಆರ್ ನಿನ್ನೆ ಗುಜರಾತ್ ಜೈಂಟ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ಮುಖ್ಯ ರುವಾರಿ ರಿಂಕು ಸಿಂಗ್. ಪಂದ್ಯದ ಕೊನೆಯ ಓವರ್‌ನಲ್ಲಿ ಯಶ್ ದಯಾಳ್ ಅವರ ಎಸೆತಗಳಿಗೆ ಚಚ್ಚಿದ ಐದು ಸಿಕ್ಸ್ನ ಪರಿಣಾಮ ಪಂದ್ಯ ಕೆಕೆಆರ್ ವಶವಾಗಿತ್ತು. ಟಿವಿ ಪರದೆಯಲ್ಲಿ ಮಗನ ಆಟ ಕಂಡ ರಿಂಕು ಸಿಂಗ್ ತಂದೆ ಖಂಚಂದ್, "ಮಗ ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸಲಿ" ಎಂದು ಆಶಿಸಿದ್ದಾರೆ.
ರಿಂಕು ಸಿಂಗ್ ನಿನ್ನೆ ರಾತ್ರಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಹೆಸರನ್ನು ಗುರುತು ಮಾಡಿದ್ದರು. ಆದರೆ ಇವರ ಹಿನ್ನೆಲೆ ಕೇಳಿದರೆ ಅಚ್ಚರಿಯಾಗುತ್ತದೆ. ಸಿಂಗ್ ಉತ್ತರ ಪ್ರದೇಶದ ಅಲಿಗಢದಲ್ಲಿ 1997ರಲ್ಲಿ ಜನಿಸಿದರು. ಇವರ ತಂದೆ ಮನೆಮನೆಗೆ ತೆರಳಿ ಗ್ಯಾಸ್ ಸಿಲಿಂಡರ್ಗಳನ್ನು ಹಂಚುತ್ತಿದ್ದರು. ಅಣ್ಣ ಆಟೋ ಡ್ರೈವರ್. ಕ್ರಿಕೆಟ್ನಲ್ಲಿ ಮಗನಿಗೆ ಆಸೆ ಇತ್ತಾದರೂ ತಂದೆ ವಿರೋಧ ವ್ಯಕ್ತಪಡಿಸಿದ್ದರಂತೆ. ನಂತರ ಆತನ ಆಟದ ಬಗ್ಗೆ ಜನರು ಮಾತನಾಡುವುದನ್ನು ಕೇಳಿ ಕ್ರಿಕೆಟ್‌ಗೆ ಒಪ್ಪಿಗೆ ಕೊಟ್ಟಿದ್ದರಂತೆ.
ಈ ಬಗ್ಗೆ ಖಂಚಂದ್ ಮಾತನಾಡಿದ್ದು,"ನಾನು ಕ್ರಿಕೆಟ್ಗೆಂದು ಅವನಿಗೆ ಯಾವುದೇ ಸಹಕಾರ ನೀಡಲಿಲ್ಲ. ಕ್ರಿಕೆಟ್‌ಗೆ ಬೇಕಾದ ಎಲ್ಲವನ್ನೂ ಅವನೇ ಮಾಡಿಕೊಂಡ. ಬ್ಯಾಟ್ ಅಥವಾ ಬೇರೇನನ್ನೂ ಖರೀದಿಸಲಿಲ್ಲ. ಕ್ರಿಕೆಟ್ ಆಡುತ್ತಿರುವುದರ ಬಗ್ಗೆ ನನಗೆ ತಿಳಿದಾಗ ಅವನಿಗೆ ಓದಿನಲ್ಲಿ ಗಮನಕೊಡುವಂತೆ ಹೇಳಿದ್ದೆ. ಆದರೆ ನನ್ನ ಸಲಹೆಯನ್ನು ಆತ ಗಂಭೀರವಾಗಿ ಪರಿಗಣಿಸಲಿಲ್ಲ. ರಿಂಕು ತುಂಬಾ ಚೆನ್ನಾಗಿ ಆಡುತ್ತಾನೆ ಎಂದು ಎಲ್ಲರೂ ಹೇಳುತ್ತಿದ್ದರು. ಇದನ್ನು ಕೇಳಿ ಅವನಿಗೆ ಕ್ರಿಕೆಟ್ ಆಡುವ ಇಚ್ಛೆ ಇದ್ದರೆ ಅದರಲ್ಲೇ ಮುಂದುವರೆಯುವಂತೆ ಸಲಹೆ ನೀಡಿದ್ದೆ" ಹೇಳಿಕೊಂಡಿದ್ದಾರೆ. "ನಿನ್ನೆ ಪಂದ್ಯವನ್ನು ಅವನು ಗೆಲ್ಲಿಸಿದ ರೀತಿಗೆ ನನಗೆ ಸಂತೋಷ ತಂದಿದೆ. ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡಬೇಕೆಂದು ನಾನು ಬಯಸುತ್ತೇನೆ" ಎಂದು ಖಂಚಂದ್ ತಮ್ಮ ಮನದಾಳ ತಿಳಿಸಿದರು.
ಯಶ್ ದಯಾಳ್ ಮೆಚ್ಚುಗೆ:ಪಂದ್ಯದ ಗೆಲುವಿನ ನಂತರ ರಿಂಕು ಸಿಂಗ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಮರಣೀಯ ಗೆಲುವು ಎಂದು ಬರೆದುಕೊಂಡಿದ್ದರು. ಇದಕ್ಕೆ ಯಶ್ ದಯಾಳ್ ಕಾಮೆಂಟ್ ಮಾಡಿದ್ದು, ಬೆಂಕಿ ಮತ್ತು ಎರಡು ಕೆಂಪು ಹೃದಯದ ಜೊತೆ, "ಬಿಗ್ ಪ್ಲೇಯರ್ ಭಾಯಿ" ಎಂದು ಬರೆದಿದ್ದಾರೆ. ಯಶ್ ಅವರ ಮುಂದಿನ ಪಂದ್ಯಕ್ಕೆ ಶುಭ ಹಾರೈಸುತ್ತಾ, ಕೆಕೆಆರ್ ಬರೆದುಕೊಂಡಿದೆ. "ಕ್ರಿಕೆಟ್‌ನ ಅತ್ಯುತ್ತಮ ಆಟದಲ್ಲಿ ಕಠಿಣ ದಿನ ಸಂಭವಿಸುತ್ತದೆ. ನೀವು ಚಾಂಪಿಯನ್ ಆಗಿದ್ದೀರಿ. ನಿಮ್ಮ ಆಟದ ಅದ್ಭುತ ಪ್ರದರ್ಶನ ಮುಂದೆ ಬರಲಿದೆ" ಎಂದು ಕೆಕೆಆರ್ ತನ್ನ ಇನ್ಸ್ಟಾಗ್ರಾಂನಲ್ಲಿ ಬರೆದಿದೆ. ಈ ಮೂಲಕ ಇಬ್ಬರು ಕ್ರೀಡಾ ಸ್ಫೂರ್ತಿ ತೋರಿದ್ದಾರೆ.
ಇದನ್ನೂ ಓದಿ:IPL: 5 ಎಸೆತಗಳಿಗೆ 5 ಸಿಕ್ಸರ್ ಬಾರಿಸಿದವರು; ಒಂದೇ ಓವರ್‌ನಲ್ಲಿ ಹೆಚ್ಚು ರನ್ ನೀಡಿದ ಬೌಲರ್‌ಗಳಿವರು..