ಮುಂಬೈ:ಈ ವರ್ಷದಿಂದ ಆರಂಭವಾದ ವುಮೆನ್ಸ್ ಪ್ರೀಮಿಯರ್ ಲೀಗ್ ಯಶಸ್ಸು ಕಂಡಿದ್ದು, ಇದೇ ವರ್ಷ ದಿಪಾವಳಿ ಸಮಯಕ್ಕೆ ಮತ್ತೆ ಇನ್ನೊಂದು ಆವೃತ್ತಿಯ ಡಬ್ಲ್ಯೂಪಿಎಲ್ ಆಡಿಸುವ ಮುನ್ಸೂಚನೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದ್ದಾರೆ. ಅದು ತವರು ಮತ್ತು ತವರಿನಾಚೆಯ ಮಾದರಿಯಲ್ಲಿ ಇರಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಗ್ಗೆ ತಿಳಿಸಿದ್ದಾರೆ. "ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ತವರು ಮತ್ತು ತವರಿನಾಚೆಯ ಮಾದರಿಯಲ್ಲಿ ಇದೇ ವರ್ಷ ಮಾಡುವ ಚಿಂತನೆಯಲ್ಲಿದ್ದೇವೆ. ದೀಪಾವಳಿಯ ಸಮಯಕ್ಕೆ ಸರಿ ಹೊಂದುವಂತೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ" ಎಂದಿದ್ದಾರೆ.
ಆದರೆ ಎರಡು ಆವೃತ್ತಿಗಳನ್ನು ಮುಂದಿನ ವರ್ಷಗಳಲ್ಲೂ ಆಯೋಜಿಸುವ ಚಿಂತನೆ ಇಲ್ಲ. ಬಿಡುವಿನ ಸಮಯ ನೋಡಿಕೊಂಡು ಲೀಗ್ನ್ನು ಆಡಿಸುವ ಬಗ್ಗೆ ಚರ್ಚೆಗಳು ಮಾಡಲಾಗುತ್ತಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ತನ್ನದೇ ಆದ ಅಭಿಮಾನಿಗಳನ್ನು ಗಳಿಸಿದೆ. ಮುಂದಿನ ದಿನಗಳಲ್ಲಿ ಈ ಅಭಿಮಾನಿಗಳ ಸಂಖ್ಯೆ ಹೆಚ್ಚಲಿದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಆವೃತ್ತಿಯು ಈ ವರ್ಷ ಮಾರ್ಚ್ 4 ರಿಂದ ಮಾರ್ಚ್ 26 ರವರೆಗೆ ಮುಂಬೈನ ಎರಡು ಸ್ಥಳಗಳಲ್ಲಿ ನಡೆಸಲಾಯಿತು. ಐದು ತಂಡಗಳು ಭಾಗವಹಿಸಿದ್ದು, ಡಬಲ್ ರೌಂಡ್ ರಾಬಿನ್ ಸುತ್ತುಗಳಲ್ಲಿ ಪಂದ್ಯವನ್ನು ನಡೆಸಲಾಗಿತ್ತು. ಮಹಿಳಾ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾಗುವ ಐದು ದಿನಗಳ ಮೊದಲು ಮುಕ್ತಾಯಗೊಂಡಿತು. ನಾಕೌಟ್ ಸುತ್ತಿನ ಪಂದ್ಯಗಳು ಹೆಚ್ಚು ಜನರನ್ನು ಆಕರ್ಷಿಸಿತ್ತು.