ಮುಂಬೈ (ಮಹಾರಾಷ್ಟ್ರ): ರಾಜಸ್ಥಾನ ರಾಯಲ್ಸ್ ತಂಡದಯಶಸ್ವಿ ಜೈಸ್ವಾಲ್ ಶತಕದಾಟ ವ್ಯರ್ಥವಾಗಿದೆ. ಮುಂಬೈ ಇಂಡಿಯನ್ಸ್ ತಂಡ ಬ್ಯಾಟರ್ಗಳ ಸಾಂಘಿಕ ಹೋರಾಟದಿಂದ ಆರು ವಿಕೆಟ್ಗಳಿಂದ ಗೆಲುವು ಸಾಧಿಸಿದೆ. ಕೊನೆಯಲ್ಲಿ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ರೋಚಕ ಜಯ ತಂದುಕೊಟ್ಟರು.
ಇಲ್ಲಿನ ವಾಖೆಂಡೆ ಮೈದಾನದಲ್ಲಿ ನಡೆದ ಐಪಿಎಲ್ನ ಸಾವಿರದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಏಕಾಂಗಿ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಇನ್ನೂ ಮೂರು ಬಾಲ್ಗಳು ಬಾಕಿರುವಾಗಲೇ ಗೆಲುವಿನ ಕೇಕೆ ಹಾಕಿತು.
ಮುಂಬೈ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ (3) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ, ಎರಡನೇ ವಿಕೆಟ್ಗೆ ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಉತ್ತಮ ಜೊತೆಯಾಟ ನೀಡಿದರು. ಕಿಶನ್ ನಾಲ್ಕು ಬೌಂಡರಿಗಳೊಂದಿಗೆ 23 ಎಸೆತದಲ್ಲಿ 28 ರನ್ ಸಿಡಿಸಿ ನಿರ್ಗಮಿಸಿದರು. ನಂತರ ಬಂದ ಸೂರ್ಯ ಕುಮಾರ್ ಯಾದವ್ ಜೊತೆ ಸೇರಿ ಕ್ಯಾಮರೂನ್ ಗ್ರೀನ್ ತಮ್ಮ ಹೋರಾಟ ಮುಂದುವರಿಸಿದರು. 26 ಎಸೆತದಲ್ಲಿ ನಾಲ್ಕು ಬೌಂಡರಿ, ಎರಡು ಸಿಕ್ಸರ್ ಸಮೇತ 44 ರನ್ ಬಾರಿಸಿ ಗ್ರೀನ್ ಔಟಾದರು.
ಮತ್ತೊಂದೆಡೆ, ಸೂರ್ಯುಕಮಾರ್ ಬಿರುಸಿನ ಬ್ಯಾಟಿಂಗ್ ಮುಂದುವರೆಸಿ ಆಕರ್ಷಕ ಅರ್ಧಶತಕ ಸಿಡಿಸಿದರು. 29 ಎಸೆತದಲ್ಲಿ ಎಂಟು ಬೌಂಡರಿ, ಎರಡು ಸಿಕ್ಸರ್ಗಳೊಂದಿಗೆ 55 ರನ್ ಸಿಡಿಸಿ ನಿರ್ಗಮಿಸಿದರು. ಈ ವೇಳೆ ಮುಂಬೈ ಮತ್ತೆ ಒತ್ತಡಕ್ಕೆ ಸಿಲುಕಿತು. ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಜವಾಬ್ದಾರಿಯ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣವಾದರು. ಅದರಲ್ಲೂ, ಕೊನೆಯ ಓವರ್ನಲ್ಲಿ ಟಿಮ್ ಡೇವಿಡ್ ಸಿಡಿಸಿದ ಮೂರು ಹ್ಯಾಟ್ರಿಕ್ ಸಿಕ್ಸ್ಗಳು ರೋಚಕ ಗೆಲುವಿಗೆ ಕಾರಣವಾಯಿತು. ಕೇವಲ 14 ಎಸೆತದಲ್ಲಿ ಐದು ಸಿಕ್ಸರ್ ಮತ್ತು ಎರಡು ಬೌಂಡರಿಯೊಂದಿಗೆ ಟಿಮ್ ಅಜೇಯ 44 ರನ್ ಬಾರಿಸಿದರು. 21 ಬಾಲ್ನಲ್ಲಿ 29 ರನ್ ಕಲೆ ಹಾಕಿದ ತಿಲಕ್ ಮರ್ಮಾ ಸಹ ಅಜೇಯರಾಗಿ ಉಳಿದರು.