ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಗುಜರಾತ್ ಟೈಟನ್ಸ್ ಬ್ಯಾಟರ್ ಮ್ಯಾಥ್ಯೂ ವೇಡ್‌ಗೆ ಎಚ್ಚರಿಕೆ ನೀಡಲಾಗಿದೆ. ಮ್ಯಾಥ್ಯೂ ವೇಡ್ ನಿನ್ನೆ ನಡೆದ ಪಂದ್ಯದಲ್ಲಿ ಔಟಾದ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಹೆಲ್ಮೆಟ್ ಬಿಸಾಡಿ, ಬ್ಯಾಟ್ ಅನ್ನು ನೆಲಕ್ಕೆಸೆದು ಬೇಸರದ ಜೊತೆ ಕೋಪ ಹೊರಹಾಕಿದ್ದರು.
ಆಗಿದ್ದೇನು? ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಲು ಮುಂದಾದ ಗುಜರಾತ್ ಟೈಟನ್ಸ್‌ಗೆ ಆರಂಭಿಕ ಆಘಾತ ಎದುರಾಯಿತು. 3ನೇ ಓವರ್‌ನಲ್ಲಿ ಓಪನರ್ ಶುಭ್ಮನ್ ಗಿಲ್ ಒಂದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಗಿಲ್ ವಿಕೆಟ್ ಪತನದ ಬಳಿಕ ಬ್ಯಾಟ್ ಮಾಡಲು ಕ್ರೀಸಿಗಿಳಿದ ಮ್ಯಾಥ್ಯೂ ವೇಡ್ 2 ಬೌಂಡರಿ, ಒಂದು ಸಿಕ್ಸರ್‌ನೊಂದಿಗೆ 16 ರನ್‌ಗಳ ಮೂಲಕ ದೊಡ್ಡ ಸ್ಕೋರ್ ಮಾಡಲು ಮುಂದಾಗಿದ್ದರು. ಆದರೆ, ಪವರ್-ಪ್ಲೇನ ಕೊನೆಯ ಓವರ್‌ನಲ್ಲಿ ಆಫ್ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತವನ್ನು ವೇಡ್ ಸ್ವೀಪ್ ಮಾಡಲೆತ್ನಿಸಿದರು. ಈ ವೇಳೆ ಚೆಂಡು ವೇಡ್ ಕಾಲ್ಗೆ ಬಡಿದಿತ್ತು.
ಮೇಲ್ನೋಟಕ್ಕೆ ಮ್ಯಾಥ್ಯೂ ವೇಡ್ ಎಲ್‌ಬಿಡಬ್ಲ್ಯು ಆಗಿರುವಂತೆ ಕಂಡರೂ, ಆನ್‌ಫೀಲ್ಡ್ ಅಂಪೈರ್ ನಾಟ್‌ಔಟ್ ಎಂದು ತೀರ್ಪು ಕೊಟ್ಟರು. ಬಳಿಕ ಆರ್‌ಸಿಬಿ ಡಿಆರ್‌ಎಸ್ ತೆಗೆದುಕೊಂಡಿತು. ಟೆಲಿವಿಷನ್ ರೀಪ್ಲೇ ವೇಳೆ ಚೆಂಡು ಬ್ಯಾಟ್ ಸಮೀಪ ಬಂದಾಗ ಅದರ ದಿಕ್ಕು ಬದಲಾದದ್ದು ಕಾಣಿಸುತ್ತಿತ್ತು. ಕೇವಲ ಅದನ್ನೇ ಆಧರಿಸಿ ತೀರ್ಪು ನೀಡಿದ್ದರೆ ನಾಟ್‌ಔಟ್ ಎಂದೇ ಘೋಷಿಸಬೇಕಿತ್ತು. ಆದರೆ, ಅಲ್ಟ್ರ್ರಾ ಎಡ್ಜ್ ತಂತ್ರಜ್ಞಾನ ಬಳಕೆ ಮಾಡಿ ಪರಿಶೀಲಿಸಿದಾಗ ಅಲ್ಲಿ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂಬಂತೆ ತಿಳಿಯಿತು. ದ್ವಂದ್ವಕ್ಕೆ ಸಿಲುಕದೇ ಇರಲೆಂದು 3ನೇ ಅಂಪೈರ್ ಅಲ್ಟ್ರಾ ಎಡ್ಜ್ ತಂತ್ರಜ್ಞಾನಕ್ಕೆ ಬೆಲೆ ಕೊಟ್ಟು ಆನ್‌ಫೀಲ್ಡ್ ಅಂಪೈರ್ ನೀಡಿದ್ದ ನಾಟ್‌ಔಟ್ ತೀರ್ಪನ್ನು ಬದಲಾಯಿಸಿ ಔಟ್ ನೀಡುವಂತೆ ಸೂಚಿಸಿತು.