ಕರ್ನಾಟಕ

karnataka

By

Published : Apr 20, 2023, 4:24 PM IST

ETV Bharat / sports

ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್​ಗೆ ₹12 ಲಕ್ಷ ದಂಡ

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್‌ಗೆ ದಂಡ ವಿಧಿಸಲಾಗಿದೆ.

KL Rahul
ಕೆಎಲ್ ರಾಹುಲ್

ಜೈಪುರ (ರಾಜಸ್ಥಾನ) :ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿಧಾನಗತಿ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ. ಲಕ್ನೋ ತಂಡಕ್ಕೆ ನೀಡಿದ ನಿಗದಿತ ಸಮಯದಲ್ಲಿ ಬೌಲಿಂಗ್​ ಮುಗಿಸಲು ಸಾಧ್ಯವಾಗದೇ ಇರುವುದರಿಂದ ದಂಡ ಕಟ್ಟುವಂತಾಗಿದೆ. ಐಪಿಎಲ್​ನ ಸ್ಲೋ ಓವರ್ ರೇಟ್ ಅಡಿಯಲ್ಲಿ ಲಕ್ನೋ ತಂಡ ಎದುರಿಸುತ್ತಿರುವ ಮೊದಲ ದಂಡ ಪ್ರಕರಣ ಇದಾಗಿದೆ.

ಐಪಿಲ್​​ ಮಹಾ ಕ್ರಿಕೆಟ್‌ ಸಂಗ್ರಾಮದಲ್ಲಿ ನಿಧಾನಗತಿಯ ಓವರ್ ರೇಟ್‌ನಿಂದಾಗಿ ನಾಯಕರಿಗೆ ದಂಡ ವಿಧಿಸಿದ ಪ್ರಕರಣ ಇದೇ ಮೊದಲಲ್ಲ. ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ 12 ಲಕ್ಷ ರೂ. ದಂಡ ಕಟ್ಟಬೇಕಾಯಿತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ನಿಧಾನಗತಿಯ ಓವರ್ ರೇಟ್‌ ಕಾಯ್ದುಕೊಂಡಿದ್ದು ಅಂದು ನಾಯಕನಾಗಿದ್ದ ಸೂರ್ಯ ಕುಮಾರ್ ಯಾದವ್​ ಮತ್ತು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರಿಗೂ​ ದಂಡದ ಮೂಲಕ ಬಿಸಿ ಮುಟ್ಟಿಸಲಾಗಿತ್ತು.

ಕೆಲವು ದಿನಗಳಿಂದ 2023ರ ಐಪಿಎಲ್‌ನ​ ಎಲ್ಲ ಪಂದ್ಯಗಳೂ ಕೊನೆ ಓವರ್‌ಗಳವರೆಗೆ ಹೋಗುತ್ತಿರುವುದು ಕ್ರಿಕೆಟ್​ ಅಭಿಮಾನಿಗಳಿಗೆ ರೋಚಕ ಆಟದ ರಸದೌತಣವನ್ನೇ ಉಣಬಡಿಸಿವೆ. ನಿನ್ನೆ ನಡೆದ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ತಂಡಗಳ ಕಾದಾಟದಲ್ಲಿ ಗೆಲ್ಲುವವರು ಯಾರು ಎಂಬುದು ಕೊನೆ ಓವರ್‌ವರೆಗೂ ಪ್ರೇಕ್ಷಕರು ಕಾದು ನೋಡುವಂತೆ ಮಾಡಿತ್ತು.

ರಾಜಸ್ಥಾನ vs ಲಕ್ನೋ ಪಂದ್ಯದ ಹೈಲೈಟ್ಸ್ : ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ರಾಜಸ್ಥಾನ ರಾಯಲ್ಸ್​ ತಂಡವನ್ನು ಲಕ್ನೋ ನಿಗದಿತ 20 ಓವರ್​ಗಳಲ್ಲಿ ಏಳು ವಿಕೆಟ್​ ನಷ್ಟಕ್ಕೆ 154 ರನ್​ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ನಾಯಕ ಕೆ.ಎಲ್.ರಾಹುಲ್​ ಮತ್ತು ಕೈಲ್​ ಮೇಯರ್ಸ್​ ತಂಡಕ್ಕೆ ಪವರ್​ ಪ್ಲೇನಲ್ಲಿ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿದ್ದರು. ಸಹಾ ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್​ಗೆ ಈ ಜೋಡಿ 82 ರನ್​ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿತ್ತು. ರಾಜಸ್ತಾನ ಪರ ರವಿಚಂದ್ರನ್​ ಆಶ್ವಿನ್​ 2 ವಿಕೆಟ್​ ಪಡೆದು ಮಿಂಚಿದ್ದರು.

ಲಕ್ನೋ ನೀಡಿದ್ದ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನದ ಆರಂಭಿಕರಾದ ಜೈಸ್ವಾಲ್​ ಮತ್ತು ಜೋಸ್​ ಬಟ್ಲರ್​ ಉತ್ತಮ ಆರಂಭ ನೀಡಿದ್ದರು. ಬಳಿಕ ಬಂದ ಮಧ್ಯಮ ಕ್ರಮಾಂಕದ ಯಾವೊಬ್ಬ ಆಟಗಾರರೂ ಕೂಡ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಲಿಲ್ಲ. ಹೀಗಾಗಿ 20 ಓವರ್​ಗಳಲ್ಲಿ ರಾಜಸ್ತಾನ​ ತಂಡವು 6 ವಿಕೆಟ್​ ಕಳೆದುಕೊಂಡು 144 ರನ್​ ಮಾತ್ರ ಕಲೆ ಹಾಕಿತ್ತು. ಲಕ್ನೋ ಪರ ಅವೇಶ್​ ಖಾನ್​ 4 ಓವರ್​ ಬೌಲಿಂಗ್​ನಲ್ಲಿ 25 ರನ್​ ನೀಡಿ 3 ವಿಕೆಟ್​ ಕಬಳಿಸಿದ್ದರು.

ಇದರೊಂದಿಗೆ ಲಕ್ನೋ ಸೂಪರ್​ ಜೈಂಟ್ಸ್ ತಂಡ 10 ರನ್​ಗಳಿಂದ ಗೆಲುವು ಸಾಧಿಸಿತು. ಪ್ರಸಕ್ತ ಟೂರ್ನಿಯಲ್ಲಿ ರಾಜಸ್ಥಾನ ಮತ್ತು ಲಕ್ನೋ ತಂಡಗಳು ತಲಾ 6 ಪಂದ್ಯಗಳನ್ನು ಆಡಿದ್ದು, ಈ ಪೈಕಿ ತಲಾ ನಾಲ್ಕು ಪಂದ್ಯಗಳನ್ನು ಗೆದ್ದಿವೆ. ಅಂಕಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಮುಂದುವರಿದರೆ, ಲಕ್ನೋ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ :ರಾಯಲ್ಸ್​ ತವರಲ್ಲಿ ಗೆಲುವಿನ ಪತಾಕೆ ಹಾರಿಸಿದ ಲಕ್ನೋ: ಫೋಟೋಗಳಲ್ಲಿ ಮ್ಯಾಚ್​ ನೋಡಿ..

ABOUT THE AUTHOR

...view details