ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಖನೌ ಸೂಪರ್ ಜೈಂಟ್ಸ್ ರೋಚಕ ಜಯ ದಾಖಲಿಸಿದೆ. ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೆಎಲ್ ರಾಹುಲ್ ಪಡೆಯು ಒಂದು ವಿಕೆಟ್ನಿಂದ ಗೆಲುವು ಸಾಧಿಸಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಮೊದಲ ಬ್ಯಾಟಿಂಗ್ಗೆ ಇಳಿದ ಆರ್‌ಸಿಬಿ ಮೂವರು ಅಗ್ರ ಕ್ರಮಾಂಕದ ಬ್ಯಾಟರ್ಗಳು ಅರ್ಧಶತಕದೊಂದಿಗೆ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 212 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.
ಈ ಸವಾಲಿನ ಗುರಿ ಬೆನ್ನಟ್ಟಿದ್ದ ಕೆಎಲ್ ರಾಹುಲ್ ನೇತೃತ್ವದ ಲಖನೌ ತಂಡ ನಿರೀಕ್ಷಿತ ಆರಂಭವನ್ನು ಪಡೆಯಲಿಲ್ಲ. ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ ಅವರನ್ನು ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ನಂತರದಲ್ಲಿ ವೇಯ್ನ್ ಪಾರ್ನೆಲ್ ಅವರು ಒಂದೇ ಓವರ್ನಲ್ಲಿ ದೀಪಕ್ ಹುಡಾ 9 ರನ್ ಮತ್ತು ಕೃನಾಲ್ ಪಾಂಡ್ಯ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಇದರಿಂದ 23 ರನ್ಗಳಿಗೆ ಲಖನೌ ತಂಡ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಾಲ್ಕನೇ ವಿಕೆಟ್ಗೆ ನಾಯಕ ರಾಹುಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಉತ್ತಮ ಜೊತೆಯಾಟ ನೀಡಿದರು. ಮಾರ್ಕಸ್ (65) ಬಿರುಸಿನ ಬ್ಯಾಟಿಂಗ್ ಪ್ರರ್ದಶಿಸಿದರೆ ರಾಹುಲ್ (18) ತಾಳ್ಮೆ ಆಟವಾಡಿದರು. ಮಾರ್ಕಸ್ 30 ಬಾಲ್ಗಳಲ್ಲಿ ಐದು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಮೇತ 65 ರನ್ ಸಿಡಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ನಂತರ ಬಂದ ನಿಕೋಲಸ್ ಪೂರನ್ ಸ್ಫೋಟಕ ಆಟವಾಡಿದರು. ಕೇವಲ 15 ಬಾಲ್ಗಳಲ್ಲೇ ಅರ್ಧಶತಕ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಅರ್ಧಶತಕ ದಾಖಲಿಸಿದರು. ಅಲ್ಲದೇ, ಕೇವಲ 19 ಬಾಲ್ಗಳಲ್ಲಿ ಏಳು ಸಿಕ್ಸರ್ಗಳು ಮತ್ತು ನಾಲ್ಕು ಬೌಂಡರಿಗಳೊಂದಿಗೆ 62 ರನ್ ಸಿಡಿಸಿ ಆರ್‌ಸಿಬಿ ತಂಡದ ಗೆಲುವಿಗೆ ಕಂಟಕವಾದರು. ಇದರ ನಡುವೆ ಆಯುಷ್ ಬದೋನಿ 30 ರನ್ ಬಾರಿಸಿ ಔಟಾದರು. ಕೊನೆಗೆ 9 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ಲಖನೌ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಭರ್ಜರಿ ಅರ್ಧಶತಕದ ಆಟದಿಂದ ಎರಡು ವಿಕೆಟ್ ನಷ್ಟಕ್ಕೆ ಆರ್‌ಸಿಬಿ 212 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ 33 ಎಸೆತಗಳಿಗೆ 50 ರನ್‌ಗಳ ಜೊತೆಯಾಟ ನೀಡಿದರು. ಇಬ್ಬರೂ ಆಟಗಾರರು ಲಕ್ನೋ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಪವರ್ ಪ್ಲೇಯನ್ನು ಸಮರ್ಥವಾಗಿ ಬಳಸಿಕೊಂಡ ಕೊಹ್ಲಿ ಬಿರುಸಿನ ಆಟವಾಡಿದರು. 44 ಎಸೆತಗಳನ್ನು ಎದುರಿಸಿದ ಅವರು 4 ಬೌಂಡರಿ ಮತ್ತು 4 ಸಿಕ್ಸ್ನಿಂದ 61 ರನ್ ಸಂಪಾದಿಸಿದರು. ಈ ಮೂಲಕ ಐಪಿಎಲ್ ವೃತ್ತಿಜೀವನದ 46ನೇ ಅರ್ಧಶತಕ ದಾಖಲಿಸಿದರು. ಅಮಿತ್ ಮಿಶ್ರಾ ಸ್ಪಿನ್ ಎಸೆತವನ್ನು ಸಿಕ್ಸರ್‌ಗಟ್ಟುವ ಬರದಲ್ಲಿ ಕ್ಯಾಚಿತ್ತು ಔಟಾದರು.
ಮ್ಯಾಕ್ಸ್ವೆಲ್ ನಾಯಕನ ಜೊತೆಗೂಡಿ ಮತ್ತೊಂದು ಬೆಸ್ಟ್ ಇನ್ನಿಂಗ್ಸ್ ಕಟ್ಟಿದರು. ಆಸೀಸ್ ದಾಂಡಿಗ ತಮ್ಮ ಹಳೆಯ ಬ್ಯಾಟಿಂಗ್ ವೈಖರಿಯನ್ನು ಪ್ರದರ್ಶಿಸಿದರು. 29 ಬಾಲ್ನಲ್ಲಿ 6 ಸಿಕ್ಸ್ ಮತ್ತು 3 ಬೌಂಡರಿಯಿಂದ 59 ರನ್ ಗಳಿಸಿ, ಇನ್ನಿಂಗ್ಸ್ ಮುಕ್ತಾಯಕ್ಕೆ ಒಂದು ಬಾಲ್ ಬಾಕಿ ಇದ್ದಾಗ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ನಾಯಕ ಡು ಪ್ಲೆಸಿಸ್ 46 ಬಾಲ್ನಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿಯಿಂದ 79 ರನ್ ಗಳಿಸಿ ಅಜೇಯರಾಗುಳಿದರು. ಲಕ್ನೋ ಪರ ಮಾರ್ಕ್ ವುಡ್ ಮತ್ತು ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ:RCB vs LSG: ಆರ್‌ಸಿಬಿ ವಿರುದ್ಧ ಲಕ್ನೋ ಕಣಕ್ಕೆ, ತವರಲ್ಲಿ 2ನೇ ಜಯ ಕಾಣ್ತಾರಾ ಫಾಫ್ ಹುಡುಗರು