2019 ರ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಯೋಜನೆಯಾಗಿದ್ದು, ತಮ್ಮ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಹುರಿದುಂಬಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದ ವನಿಂದು ಹಸರಂಗ ಮತ್ತು ಜೋಸ್ ಹೇಜಲ್ವುಡ್ ಗಾಯದ ಕಾರಣ ಟೂರ್ನಿಯ ಆರಂಭಿಕ ಪಂದ್ಯಗಳಿಂದ ದೂರವುಳಿಯಲಿದ್ದಾರೆ.
ಇಂದು ನಡೆಯುವ ಪಂದ್ಯದಲ್ಲಿ ಆರ್ಸಿಬಿ, ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಗೆಲುವಿನ ಮೂಲಕ ಉಭಯ ತಂಡಗಳು ಕಣಕ್ಕಿಳಿಯಲಿದ್ದರೆ, ಆರ್ಸಿಬಿ ಮೊದಲ ಟೂರ್ನಿಯ ಮೊದಲ ಪಂದ್ಯವನ್ನು ತವರು ನೆಲದಲ್ಲೇ ಆಡುತ್ತಿದೆ. ಗೆಲುವಿನ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡುವ ತವಕದಲ್ಲಿದೆ.
ಹೇಜಲ್ವುಡ್, ಹಸರಂಗ ಇಲ್ಲ:ಇನ್ನೊಂದೆಡೆ ನಾಯಕ ಫಾಫ್ ಡು ಪ್ಲೆಸ್ಸಿ ನೇತೃತ್ವದಲ್ಲಿ ತಂಡ ಟೂರ್ನಿಗೆ ಭರ್ಜರಿ ತಾಲೀಮು ನಡೆಸಿದೆ. ಆದರೆ, ಪ್ರಮುಖ ಆಟಗಾರರ ಗಾಯದ ಸಮಸ್ಯೆ ತಂಡಕ್ಕೆ ಮುಳುವಾಗಲಿದೆ. ಶ್ರೀಲಂಕಾದ ಆಲ್ರೌಂಡರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ಬೌಲರ್ ಜೋಶ್ ಹೇಜಲ್ವುಡ್ ಮತ್ತು ಕಳೆದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಜತ್ ಪಾಟೀದಾರ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದು ತಂಡದ ಸಂಯೋಜನೆಗೆ ಪೆಟ್ಟು ನೀಡಲಿದೆ.
ಹಸರಂಗ ಏಪ್ರಿಲ್ 9 ರ ಬಳಿಕ ತಂಡಕ್ಕೆ ಲಭ್ಯವಾಗಲಿದ್ದಾರೆ. ಜೋಶ್ ಹೇಜಲ್ವುಡ್ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಆರಂಭಿಕ ಪಂದ್ಯಗಳಿಗೆ ಅವರ ಬದಲಿಗೆ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿ ಅವರನ್ನು ಪರಿಗಣಿಸಲಾಗುವುದು. ಇನ್ನು ಹಿಮ್ಮಡಿ ಗಾಯದಿಂದಾಗಿ ಐಪಿಎಲ್‌ನ ಮೊದಲಾರ್ಧವನ್ನು ಕಳೆದುಕೊಳ್ಳಲಿರುವ ರಜತ್ ಪಾಟೀದಾರ್ ಕುರಿತು ಫ್ರಾಂಚೈಸಿ ಮಾಹಿತಿ ಪಡೆದುಕೊಳ್ಳಲಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪಾಟೀದಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ತಿಳಿಸಿದರು.